ಪ್ರವಾಹ: ದೇಶಾದ್ಯಂತ 100ಕ್ಕೂ ಅಧಿಕ ಮಂದಿ ಬಲಿ

Update: 2019-08-11 05:37 GMT

  ಹೊಸದಿಲ್ಲಿ, ಆ.11: ಕಳೆದ ಒಂದು ವಾರದಲ್ಲಿ ದೇಶಾದ್ಯಂತ ಸಂಭವಿಸಿರುವ ಪ್ರವಾಹಕ್ಕೆ 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ಮನೆ-ಮಠ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಪ್ರವಾಹದಿಂದ ಹೆಚ್ಚು ಹಾನಿಗೀಡಾಗಿವೆ.

ರಾಜ್ಯದಾದ್ಯಂತ ಹಳ್ಳಿ ಪ್ರದೇಶದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ತಂಡವನ್ನು ರಚಿಸಿ, ಏರ್ ಲಿಫ್ಟ್ ಮೂಲಕ ಆಹಾರವನ್ನು ಪೂರೈಸುವಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇನಾ ತಂಡಗಳಿಗೆ ಸೂಚಿಸಿದ್ದಾರೆ.

2 ಲಕ್ಷಕ್ಕೂ ಅಧಿಕ ಜನರನ್ನು ತೆರವುಗೊಳಿಸಲಾಗಿದ್ದು, ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ 2 ವಾರ ಕಳೆದರೂ ರಾಜ್ಯದಲ್ಲಿ ಸಚಿವ ಸಂಪುಟವನ್ನು ರಚಿಸಿಲ್ಲ.

ಮಹಾರಾಷ್ಟ್ರದಲ್ಲಿ ಪ್ರವಾಹಪೀಡಿತ ಪ್ರದೇಶದಲ್ಲಿ 30 ಮಂದಿ ಮೃತಪಟ್ಟಿದ್ದಾರೆ. ಅತ್ಯಂತ ಹೆಚ್ಚು ಬಾಧಿತವಾಗಿರುವ ಜಿಲ್ಲೆಗಳ ಪೈಕಿ ಒಂದಾಗಿರುವ ಕೋಲ್ಹಾಪುರದಲ್ಲಿ ಆರು ದಿನಗಳಿಂದ ರಕ್ಷಣಾಕಾರ್ಯಾಚರಣೆ ನಡೆಯುತ್ತಿದ್ದರೂ ನೂರಾರು ಜನರು ಇನ್ನೂ ತಮ್ಮ ರಕ್ಷಣೆಗಾಗಿ ಕಾದು ಕುಳಿತ್ತಿದ್ದಾರೆ.

**ಕರ್ನಾಟಕದಲ್ಲಿ 17 ಜಿಲ್ಲೆಗಳ 1,000ಕ್ಕೂ ಹಳ್ಳಿಗಳು ಪ್ರವಾಹದಿಂದ ತತ್ತರಿಸಿಹೋಗಿವೆ. ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕ ಜಿಲ್ಲೆಗಳು ಹೆಚ್ಚು ಬಾಧಿತವಾಗಿದ್ದು, ರಾಜ್ಯಕ್ಕೆ 6,000 ಕೋಟಿ ರೂ.ನಷ್ಟವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

**ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಪ್ರವಾಹಪೀಡಿತ ಬೆಳಗಾವಿ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಪ್ರವಾಹಪೀಡಿತ ಜಿಲ್ಲೆಗಳ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಆಗಸ್ಟ್ 15ರ ತನಕ ರಜೆ ಘೋಷಿಸಲಾಗಿದೆ. ಕಾರವಾರ ಸಮೀಪ ಭೂಕುಸಿತ ಉಂಟಾದ ಕಾರಣ ಕೊಂಕಣ ರೈಲ್ವೆಯ ಎಲ್ಲ ರೈಲುಗಳ ಸಂಚಾರವನ್ನು ಶನಿವಾರ ರದ್ದುಪಡಿಸಲಾಗಿತ್ತು.

**ಕೇರಳದಲ್ಲಿ ಕಳೆದ 3 ದಿನಗಳಲ್ಲಿ ಪ್ರವಾಹಸಂಬಂಧಿ ಘಟನೆಗೆ 57 ಜನರು ಸಾವನ್ನಪ್ಪಿದ್ದಾರೆ. ಸುಮಾರು 1.66 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮೂರು ಜಿಲ್ಲೆಗಳಾದ ವಯನಾಡ್, ಕಣ್ಣೂರು ಹಾಗೂ ಕಾಸರಗೋಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಆರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

**ಕಳೆದ ಮೂರು ದಿನಗಳಲ್ಲಿ ವಯನಾಡ್ ಹಾಗೂ ಮಲ್ಲಪ್ಪುರಂ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಿ ಹಲವು ಜನರು ಸಿಲುಕಿಹಾಕಿಕೊಂಡಿದ್ದಾರೆ. ವಯನಾಡ್ ಸಂಸದ ರಾಹುಲ್ ಗಾಂಧಿ ಇಂದು ವಯನಾಡ್‌ಗೆ ಭೇಟಿ ನೀಡಲಿದ್ದು, ಪ್ರವಾಹಪೀಡಿತ ಜನರಿಗೆ ಅಗತ್ಯವಿರುವ ಸಹಾಯ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ರಾಹುಲ್ ಈಗಾಗಲೇ ವಿನಂತಿಸಿದ್ದಾರೆ.

**ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4 ಸಂಪೂರ್ಣ ಬಂದ್ ಆಗಿದ್ದು, ಕರ್ನಾಟಕದ ವಾಹನಗಳು ಸೋಲಾಪುರ ಮಾರ್ಗವಾಗಿ ಮುಂಬೈಗೆ ತೆರಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News