ಬಿಯರ್ ಉತ್ಪಾದನಾ ಕಂಪನಿಗಳ ಮೇಲೆ ದಾಳಿ: 700 ಕೋಟಿ ರೂ. ಅಘೋಷಿತ ಆದಾಯ ಪತ್ತೆ

Update: 2019-08-11 09:01 GMT
Photo: PTI

ಚೆನ್ನೈ, ಆ.11: ತಮಿಳುನಾಡಿನ ಎರಡು ಪ್ರಮುಖ ಬಿಯರ್ ಉತ್ಪಾದನಾ ಕಂಪನಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಸುಮಾರು 700 ಕೋಟಿ ರೂಪಾಯಿ ಅಘೋಷಿತ ಆದಾಯ ಪತ್ತೆ ಮಾಡಿದ್ದಾರೆ.

ಮಂಗಳವಾರ ಮುಂಜಾನೆ ಈ ಶೋಧ ಕಾರ್ಯಾಚರಣೆ ನಡೆದಿದ್ದು, ಚೆನ್ನೈ, ಕೊಯಮತ್ತೂರು, ತಂಜಾವೂರು ಸೇರಿದಂತೆ ರಾಜ್ಯದ 55 ಕಡೆಗಳಲ್ಲಿ, ಪಕ್ಕದ ಕೇರಳ, ಆಂಧ್ರಪ್ರದೇಶ ಹಾಗೂ ಗೋವಾದಲ್ಲೂ ದಾಳಿ ನಡೆದಿದೆ.

"ಆದಾಯ ತೆರಿಗೆ ಅಧಿಕಾರಿಗಳು ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಆಗಸ್ಟ್ 6ರಂದು ನಡೆಸಿದ್ದು, ಇದು ತಮಿಳುನಾಡಿನ ಪ್ರಮುಖ ಡಿಸ್ಟಿಲರಿಗೆ ಸಂಬಂಧಿಸಿದ್ದಾಗಿದೆ" ಎಂದು ಪ್ರಕಟನೆ ಹೇಳಿದೆ. ಆದರೆ ಡಿಸ್ಟಿಲರಿಯ ಹೆಸರು ಬಹಿರಂಗಪಡಿಸಿಲ್ಲ.

ಪ್ರವರ್ತಕರ ನಿವಾಸಗಳು, ಪ್ರಮುಖ ಸಿಬ್ಬಂದಿ ಹಾಗೂ ಸಲಕರಣೆಗಳ ಪೂರೈಕೆದಾರರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಈ ಸಮೂಹ, ವಸ್ತುಗಳ ಖರೀದಿಗೆ ಅಧಿಕ ವೆಚ್ಚ ತೋರಿಸಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಕದಿಯುತ್ತಿದೆ ಎಂಬ ಗುಪ್ತಚರ ಮಾಹಿತಿಯ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಅಧಿಕ ಮೊತ್ತದ ಇನ್‍ ವೈಸ್ ಸೃಷ್ಟಿಸುವ ಮೂಲಕ ತೆರಿಗೆ ತಪ್ಪಿಸಿಕೊಳ್ಳುವ ಕಾರ್ಯತಂತ್ರವನ್ನು ಕೂಡಾ ಅಧಿಕಾರಿಗಳು ಬೇಧಿಸಿದ್ದಾರೆ. ಪೂರೈಕೆದಾರರು ಹೆಚ್ಚುವರಿ ಮೊತ್ತವನ್ನು ಚೆಕ್ ಅಥವಾ ಆರ್‍ ಟಿಜಿಎಸ್ ಮೂಲಕ ಪಡೆಯುತ್ತಿದ್ದರು. ಆದರೆ ಬಳಿಕ ಆ ಹೆಚ್ಚುವರಿ ಹಣವನ್ನು ನಗದು ರೂಪದಲ್ಲಿ ಕಂಪನಿಯ ಉದ್ಯೋಗಿಗಳ ಮೂಲಕ ಮರಳಿಸುತ್ತಿದ್ದರು ಎನ್ನಲಾಗಿದೆ.

ಆರು ವರ್ಷಗಳಲ್ಲಿ ಸುಮಾರು 400 ಕೋಟಿ ರೂಪಾಯಿ ತೆರಿಗೆ ತಪ್ಪಿಸಲಾಗಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News