ಝೊಮ್ಯಾಟೋಗೆ ಮತ್ತೊಂದು ತಲೆನೋವು: ಈ ಬಾರಿ ಸಿಬ್ಬಂದಿಯ ಪ್ರತಿಭಟನೆ

Update: 2019-08-11 16:19 GMT

ಕೋಲ್ಕತಾ, ಆ.11: ಬೀಫ್ ಹಾಗೂ ಪೋರ್ಕ್ ಒಳಗೊಂಡ ಆಹಾರವನ್ನು ವಿತರಿಸಲು ತಮ್ಮನ್ನು ಬಲವಂತಪಡಿಸಲಾಗುತ್ತಿದೆ ಎಂದು ಆರೋಪಿಸಿ ಝೊಮ್ಯಾಟೊ ಆಹಾರ ವಿತರಿಸುವ ಸಿಬಂದಿಗಳು ಕೋಲ್ಕತಾದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ರೊಮ್ಯಾಟೊದ ದಾದಾಗಿರಿ ನಡೆಯುವುದಿಲ್ಲ, ನಾವು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ ಎಂದು ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

ಆ್ಯಪ್ ಆಧಾರಿತ ಆಹಾರ ವಿತರಿಸುವ ಸಂಸ್ಥೆಯಾದ ಝೊಮ್ಯಾಟೊ ದ್ವಿಚಕ್ರ ವಾಹನ ಸವಾರ ಸಿಬ್ಬಂದಿಗಳ ಮೂಲಕ ಆಹಾರ ವಿತರಿಸುತ್ತದೆ. ಆದರೆ ಹಿಂದು ಸಿಬ್ಬಂದಿ ಬೀಫ್ ಆಹಾರವನ್ನು ಮತ್ತು ಮುಸ್ಲಿಂ ಸಿಬಂದಿಗಳು ಪೋರ್ಕ್ ಒಳಗೊಂಡಿರುವ ಆಹಾರವನ್ನು ವಿತರಿಸಲು ನಿರಾಕರಿಸಿದ್ದಾರೆ.

ಕಂಪನಿ ನಮ್ಮ ಬೇಡಿಕೆಗೆ ಕಿವಿಗೊಡದೆ ನಮ್ಮ ಇಚ್ಛೆಗೆ ವಿರುದ್ಧವಾಗಿ ಬೀಫ್ ಮತ್ತು ಹಂದಿ ಮಾಂಸ ವಿತರಿಸಲು ಒತ್ತಾಯಿಸುತ್ತಿದೆ. ಬೀಫ್ ವಿತರಿಸಲು ಹಿಂದುಗಳಿಗೆ ಹಾಗೂ ಹಂದಿ ಮಾಂಸ ವಿತರಿಸಲು ಮುಸ್ಲಿಮರಿಗೆ ಸಮಸ್ಯೆಯಾಗುತ್ತಿದೆ. ಯಾವುದೇ ಪರಿಸ್ಥಿತಿಯಲ್ಲಿ ಇಂತಹ ಕೆಲಸ ಮಾಡಲು ನಾವು ಸಿದ್ಧರಿಲ್ಲ ಎಂದು ಮೌಸಿನ್ ಅಖ್ತರ್ ಎಂಬ ಸಿಬಂದಿ ಹೇಳಿದ್ದಾರೆ.

ಯಾವುದೇ ಸಂಸ್ಥೆಯು ತನ್ನ ಉದ್ಯೋಗಿಯನ್ನು ಆತನ ಧರ್ಮಕ್ಕೆ ವಿರುದ್ಧವಾಗಿ ಹೋಗುವಂತೆ ಬಲವಂತ ಮಾಡಬಾರದು. ಇದು ಸರಿಯಲ್ಲ. ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದು ಈ ಬಗ್ಗೆ ಗಮನ ಹರಿಸಲಿದ್ದೇನೆ ಎಂದು ಪಶ್ಚಿಮ ಬಂಗಾಳದ ಸಚಿವ ರಾಜೀವ್ ಬ್ಯಾನರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News