ಪಾಕ್ ವಿರುದ್ಧ ಡೇವಿಸ್ ಕಪ್ ಪಂದ್ಯ ಸ್ಥಳಾಂತರಕ್ಕೆ ಎಐಟಿಎಗೆ ಭಾರತದ ಆಟಗಾರರ ಒತ್ತಡ

Update: 2019-08-13 18:09 GMT

ಹೊಸದಿಲ್ಲಿ, ಆ.13: ಮುಂದಿನ ತಿಂಗಳು ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿರುವ ಪಾಕಿಸ್ತಾನ ವಿರುದ್ಧ ಪಂದ್ಯವನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸಲು ಭಾರತೀಯ ಡೇವಿಸ್ ಕಪ್ ತಂಡ ಒತ್ತಾಯಿಸುತ್ತಿದೆ. ಆದರೆ, ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ)ಪ್ರಧಾನ ಕಾರ್ಯದರ್ಶಿ ಹಿರೋನ್ಮಯ್ ಚಟರ್ಜಿ ಪಾಕ್‌ನಲ್ಲಿ ಭದ್ರತೆಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಅಂತರ್‌ರಾಷ್ಟ್ರೀಯ ಟೆನಿಸ್ ಫೆಡರೇಶನ್‌ನ್ನು ವಿನಂತಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.

ಚಟರ್ಜಿ ನಿರ್ಧಾರಕ್ಕೆ ಆಟಗಾರರು ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಂತರ್‌ರಾಷ್ಟ್ರೀಯ ಟೆನಿಸ್ ಫೆಡರೇಶನ್‌ನ್ನು ಸಂಪರ್ಕಿಸಲು ನಿರ್ಧರಿಸಿದೆ.

 ತಟಸ್ಥ ತಾಣಕ್ಕಾಗಿ ಮನವಿ ಸಲ್ಲಿಸುವಂತೆ ಎಐಟಿಎಗೆ ನಾವು ವಿನಂತಿಸಿದ್ದೇವೆ ಎಂದು ಭಾರತದ ನಾಯಕ ಮಹೇಶ್ ಭೂಪತಿ ಹೇಳಿದ್ದಾರೆ. ಹೊಸತಾಗಿ ಭದ್ರತೆಯನ್ನು ಪರಿಶೀಲಿಸಿದ ಬಳಿಕ ಐಟಿಎಫ್ ಸೆ.14-15ರಂದು ನಡೆಯುವ ಪಂದ್ಯಕ್ಕೆ ಹಸಿರು ನಿಶಾನೆ ತೋರಿದರೆ ವೀಸಾ ಪಡೆಯುವ ಪ್ರಕ್ರಿಯೆಯನ್ನು ಮುಂದುವರಿಸುತ್ತೇವೆ ಎಂದು ಎಐಟಿಎ ತಿಳಿಸಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದರೂ ಕೇಂದ್ರ ಸರಕಾರ ಯಾವುದೇ ಪ್ರತಿಕ್ರಿಯೆ ನೀಡದಿರುವುದಕ್ಕೆ ಎಐಟಿಎಯ ಕೆಲವು ಅಧಿಕಾರಿಗಳು ಅಚ್ಚರಿವ್ಯಕ್ತಪಡಿಸಿದ್ದಾರೆ.

ಡೇವಿಸ್ ಕಪ್ ದ್ವಿಪಕ್ಷೀಯ ಸರಣಿಯಲ್ಲ. ವಿಶ್ವ ಟೆನಿಸ್ ಒಕ್ಕೂಟ ಇದನ್ನು ಏರ್ಪಡಿಸುತ್ತಿದೆ. ಟೆನಿಸ್ ಆಟಗಾರರು ಪಾಕಿಸ್ತಾನಕ್ಕೆ ತೆರಳುವುದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ ಎಂದು ಕ್ರೀಡಾ ಮಂತ್ರಿ ಕಿರಣ್ ರಿಜಿಜು ಸೋಮವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News