ಆಧಾರ್ ಸಂಖ್ಯೆ ಸಂಗ್ರಹಿಸಲು ಕಾನೂನು ಬೆಂಬಲ ನೀಡುವಂತೆ ಚುನಾವಣಾ ಆಯೋಗ ಆಗ್ರಹ

Update: 2019-08-18 17:58 GMT

ಹೊಸದಿಲ್ಲಿ, ಆ. 18: ಮತದಾರರ ಪಟ್ಟಿಯಲ್ಲಿ ಬಹು ನಮೂದು ಪರಿಶೀಲನೆಗೆ ಹೊಸ ಮತದಾರರು ಹಾಗೂ ಈಗ ಇರುವ ಮತದಾರರ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸಲು ಕಾನೂನಿನ ಬೆಂಬಲ ನೀಡಬೇಕು ಎಂದು ಚುನಾವಣಾ ಆಯೋಗ ಕೇಂದ್ರ ಸರಕಾರದಲ್ಲಿ ಮನವಿ ಮಾಡಿದೆ.

 ಈಗಾಗಲೇ ಮತದಾರರ ಪಟ್ಟಿಯಲ್ಲಿರುವವರು ಹಾಗೂ ಮತದಾರರ ಪಟ್ಟಿಯಲ್ಲಿ ಸೇರಿಸಲು ಅರ್ಜಿ ಸಲ್ಲಿಸುವವರ ಆಧಾರ್ ಸಂಖ್ಯೆಗಳನ್ನು ಪಡೆಯಲು ಚುನಾವಣಾ ಆಯೋಗಕ್ಕೆ ಅವಕಾಶ ಕಲ್ಪಿಸಲು ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರುವಂತೆ ಪ್ರಸ್ತಾವಿಸಿ ಚುನಾವಣಾ ಆಯೋಗ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದೆ.

ಈಗ ಮತದಾರರ ಪಟ್ಟಿಯಲ್ಲಿರುವವರು ಹಾಗೂ ಹೊಸತಾಗಿ ಮತದಾನದ ಪಟ್ಟಿಯಲ್ಲಿ ಸೇರಿಸಲು ಅರ್ಜಿ ಸಲ್ಲಿಸುವವರ ಆಧಾರ್ ಸಂಖ್ಯೆ ಪಡೆಯಲು ಚುನಾವಣಾ ನೋಂದಣಿ ಅಧಿಕಾರಿಯ ಅಧಿಕಾರವನ್ನು ಸಬಲೀಕರಿಸಲು ಚುನಾವಣಾ ಕಾನೂನಿಗೆ ತಿದ್ದುಪಡಿ ಮಾಡುವಂತೆ ಚುನಾವಣಾ ಆಯೋಗ ಈ ತಿಂಗಳ ಆರಂಭದಲ್ಲಿ ಪ್ರಸ್ತಾಪ ಸಲ್ಲಿಸಿತ್ತು.

ಮತದಾರರ ಪಟ್ಟಿಯಲ್ಲಿ ಬಹು ನಮೂದು ಪರಿಶೀಲಿಸಲು ಆಧಾರ್‌ನೊಂದಿಗೆ ಮತದಾರರ ಚುನಾವಣಾ ದತ್ತಾಂಶ ಜೋಡಿಸುವ ಚುನಾವಣಾ ಆಯೋಗದ ಯೋಜನೆಗೆ 2015 ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಆಧಾರ್ ಕಾರ್ಡ್ ಬಗ್ಗೆ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ತಡೆ ಬಿದ್ದಿತ್ತು.

ರಾಷ್ಟ್ರೀಯ ಮತದಾರ ಪಟ್ಟಿ ಪರಿಷ್ಕರಣೆ ಹಾಗೂ ದೃಢೀಕರಣ ಕಾರ್ಯಕ್ರಮದ ಭಾಗವಾಗಿ ಚುನಾವಣಾ ಆಯೋಗ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News