ಬಳಕೆದಾರರ ವಿವರ ಆಧಾರ್ ಗೆ ಜೋಡಣೆ: ಫೇಸ್‌ಬುಕ್ ಮನವಿ ವಿಚಾರಣೆ ನಡೆಸಲು ಸುಪ್ರೀಂ ಒಪ್ಪಿಗೆ

Update: 2019-08-20 14:51 GMT

ಹೊಸದಿಲ್ಲಿ, ಆ. 20: ಮದ್ರಾಸ್, ಬಾಂಬೆ ಹಾಗೂ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಸಾಮಾಜಿಕ ಮಾಧ್ಯಮದ ಬಳಕೆದಾರರ ವ್ಯಕ್ತಿ ವಿವರವನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸುವ ಆಗ್ರಹಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿದ ಫೇಸ್‌ಬುಕ್ ಮನವಿಯ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಮಂಗಳವಾರ ಒಪ್ಪಿಕೊಂಡಿದೆ.

ಈ ಬಗ್ಗೆ ಸೆಪ್ಟಂಬರ್ 13ರ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರಕಾರ, ಗೂಗಲ್, ಟ್ವಿಟ್ಟರ್ ಹಾಗೂ ಇತರರಿಗೆ ಸರ್ವೋಚ್ಚ ನ್ಯಾಯಾಲಯ ನೋಟಿಸು ಜಾರಿ ಮಾಡಿದೆ. ನೋಟಿಸು ಲಭಿಸದ ಕಕ್ಷಿಗಾರರಿಗೆ ಇ-ಮೇಲ್ ಮೂಲಕ ನೋಟಿಸು ರವಾನಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಅನಿರುದ್ಧ್ ಬೋಸ್ ಅವರರನ್ನೊಳಗೊಂಡ ಪೀಠ ಹೇಳಿದೆ.

ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಸಾಮಾಜಿಕ ಜಾಲತಾಣದ ಬಳಕೆದಾರರ ವ್ಯಕ್ತಿ ವಿವರವನ್ನು ಆಧಾರ್‌ನೊಂದಿಗೆ ಜೋಡಿಸುವುದಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಮುಂದುವರಿಸಲಾಗುವುದು. ಆದರೆ, ಯಾವುದೇ ಅಂತಿಮ ನಿರ್ಧಾರ ಮಂಜೂರು ಮಾಡುವುದಿಲ್ಲ ಎಂದು ಪೀಠ ಹೇಳಿದೆ.

ರಾಷ್ಟ್ರ ವಿರೋಧಿ ಅಂಶಗಳಿರುವ ನಕಲಿ, ಮಾನಹಾನಿಕರ, ಅಶ್ಲೀಲ ಅಂಶಗಳು ಹಾಗೂ ಭಯೋತ್ಪಾದಕ ಸಾಮಗ್ರಿಗಳ ಪ್ರಸಾರ ತಡೆಯಲು ಸಾಮಾಜಿಕ ಮಾಧ್ಯಮದ ಬಳಕೆದಾರರ ವ್ಯಕ್ತಿ ವಿವರವನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸಬೇಕು ಎಂದು ತಮಿಳುನಾಡು ಸರಕಾರ ಸೋಮವಾರ ಸರ್ವೋಚ್ಚ ನ್ಯಾಯಾಲಯದ ಮುಂದೆ ಹೇಳಿತ್ತು. 12 ಅಂಕೆಗಳ ಆಧಾರ್ ಸಂಖ್ಯೆಯನ್ನು ಬಳಕೆದಾರರ ವ್ಯಕ್ತಿ ವಿವರಗಳೊಂದಿಗೆ ಜೋಡಿಸುವುದು ಬಳಕೆದಾರರ ಖಾಸಗಿ ನೀತಿ ಉಲ್ಲಂಘಿಸಿದಂತಾಗುತ್ತದೆ ಎಂಬ ನೆಲೆಯಲ್ಲಿ ತಮಿಳುನಾಡು ಸರಕಾರದ ಸಲಹೆಯನ್ನು ಫೇಸ್‌ಬುಕ್ ನಿರಾಕರಿಸಿತ್ತು.

ತುರ್ತು ಸಂದೇಶ ರವಾನೆ ವ್ಯವಸ್ಥೆಯಾದ ವ್ಯಾಟ್ಸ್ ಆ್ಯಪ್‌ನ ಅಂಶಗಳು ಆರಂಭದಿಂದ ಅಂತ್ಯದ ವರೆಗೆ ರಹಸ್ಯವಾಗಿರುವುದರಿಂದ ಹಾಗೂ ಅದರಲ್ಲಿ ಇತರರಿಗೆ ಪ್ರವೇಶಿಸಲು ಸಾಧ್ಯವಿಲ್ಲದ ಕಾರಣ ಆಧಾರ್ ಸಂಖ್ಯೆಯನ್ನು ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಫೇಸ್‌ಬುಕ್ ಇಂಕ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News