ಆಗಸ್ಟ್ ತಿಂಗಳ ಮಳೆ: ಐದು ವರ್ಷಗಳಲ್ಲೇ ಗರಿಷ್ಠ

Update: 2019-08-21 04:09 GMT

ಪುಣೆ: ಆಗಸ್ಟ್ ತಿಂಗಳ ಮೊದಲ 18 ದಿನಗಳಲ್ಲಿ ದೇಶಾದ್ಯಂತ 1204 ಮಳೆಮಾಪನ ಕೇಂದ್ರಗಳಲ್ಲಿ ಭಾರಿ ಮಳೆ ಬಿದ್ದ ದಾಖಲೆಯಾಗಿದ್ದು, ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಮಳೆ ಇದಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಬಿದ್ದ ಮಳೆಯ ದುಪ್ಪಟ್ಟು ಮಳೆ ಈ ಬಾರಿ ಬಿದ್ದಿದೆ.

ದೇಶದ 3500 ಮಳೆಮಾಪನ ಕೇಂದ್ರಗಳಲ್ಲಿ 24 ಗಂಟೆಗಳ ಅವಧಿಯಲ್ಲಿ ಬಿದ್ದ ಮಳೆಯ ಆಧಾರದಲ್ಲಿ ಹವಾಮಾನ ಇಲಾಖೆ ತೀವ್ರ ಹಾಗೂ ಅತಿ ತೀವ್ರ ಮಳೆಯ ಪ್ರಮಾಣವನ್ನು ನಿರ್ಧರಿಸುತ್ತದೆ. 2019ರ ಆಗಸ್ಟ್‌ನಲ್ಲಿ ಅತ್ಯಧಿಕ ಸಂಖ್ಯೆಯ ಮಳೆಮಾಪನ ಕೇಂದ್ರಗಳಲ್ಲಿ ಒಂದು ದಿನದ ಅವಧಿಯಲ್ಲಿ 120 ಮಿಲಿಮೀಟರ್‌ನಿಂದ 210 ಮಿಲಿಮೀಟರ್‌ವರೆಗೆ ಮಳೆಯಾಗಿದೆ. 115.6 ಮಿಲಿಮೀಟರ್‌ನಿಂದ 204.4 ಮಿಲಿಮೀಟರ್ ಮಳೆಯಾದಲ್ಲಿ ಅದನ್ನು ಭಾರಿ ಮಳೆ ಎಂದು ಹವಾಮಾನ ಇಲಾಖೆ ಪರಿಗಣಿಸುತ್ತದೆ. 24 ಗಂಟೆಗಳ ಅವಧಿಯಲ್ಲಿ 204.5 ಮಿಲಿಮೀಟರ್‌ಗಿಂತ ಅಧಿಕ ಮಳೆ ಬಿದ್ದರೆ ಅತಿ ತೀವ್ರ ಮಳೆ ಎಂದು ಪರಿಗಣಿಸಲಾಗುತ್ತದೆ. ದೇಶದಲ್ಲಿ ಈ ಬಾರಿ ಸರಾಸರಿ ವಾಡಿಕೆಯ ಪ್ರಮಾಣದಲ್ಲಿ ಮುಂಗಾರು ಮಳೆ ಬಿದ್ದಿದೆ. ಆದರೆ ಹಲವು ಕಡೆಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.

ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಜುಲೈ ತಿಂಗಳಲ್ಲಿ 914 ಕೇಂದ್ರಗಳಲ್ಲಿ ಅತಿ ತೀವ್ರ ಮಳೆಯಾಗಿದ್ದು, ಇದು 2015ರ ಬಳಿಕ ಬಿದ್ದ ಗರಿಷ್ಠ ಮಳೆಯಾಗಿದೆ.

"ಈ ಬಾರಿ ತೀರಾ ವಿಳಂಬವಾಗಿ ಅಂದರೆ ಜೂನ್ 22-23ಕ್ಕೆ ಮುಂಗಾರು ಸಕ್ರಿಯವಾಗಿದ್ದು, ತೀವ್ರ ಮಳೆಯಿಂದಾಗಿ ಮೊದಲ ಕೆಲ ದಿನಗಳಲ್ಲೇ ಅಭಾವ ಪರಿಸ್ಥಿತಿ ನೀಗಿದೆ" ಎಂದು ಹವಾಮಾನ ಸಂಶೋಧನೆ ವಿಭಾಗದ ಮುಖ್ಯಸ್ಥ ಅರವಿಂದ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News