ಮುಝಫ್ಫರನಗರ ದಂಗೆ ಪ್ರಕರಣದ ಆರೋಪಿ ಸಚಿವನಿಗೆ ಪದೋನ್ನತಿ ನೀಡಿದ ಆದಿತ್ಯನಾಥ್ ಸರಕಾರ

Update: 2019-08-21 10:09 GMT

ಲಕ್ನೋ, ಆ.21: ಉತ್ತರ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ನಂತರ ಇಂದು ಆದಿತ್ಯನಾಥ್ ಸರಕಾರದ ಮೊದಲ ಸಚಿವ ಸಂಪುಟ ವಿಸ್ತರಣೆ ನಡೆದಿದೆ. ಇಂದು ಒಟ್ಟು 23 ಹೊಸ ಸಚಿವರನ್ನು ಸಂಪುಟಕ್ಕೆ ಸೇರಿಸಲಾಗಿದ್ದರೆ ಮುಝಫ್ಫರನಗರ ದಂಗೆ ಪ್ರಕರಣದ ಆರೋಪಿ ಸಚಿವನಿಗೆ ಪದೋನ್ನತಿಯನ್ನು ಆದಿತ್ಯನಾಥ್ ನೀಡಿದ್ದಾರೆ.

ಆದಿತ್ಯನಾಥ್ ಸಂಪುಟದಲ್ಲಿರುವ ಸಚಿವ ಸುರೇಶ್ ರಾಣ ಅವರು 60ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ 2013ರ ಮುಝಫ್ಫರನಗರ ದಂಗೆ ಕುರಿತಂತೆ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರೂ ಅವರಿಗೆ ಪದೋನ್ನತಿ ನೀಡಿ ಕ್ಯಾಬಿನೆಟ್ ದರ್ಜೆಗೇರಿಸಲಾಗಿದೆ. ಧಾರ್ಮಿಕ ತಳಹದಿಯಲ್ಲಿ ಜನರ ನಡುವೆ ದ್ವೇಷ ಬೆಳೆಸಿದ ಆರೋಪ ಅವರ ಮೇಲಿದೆ.

49 ವರ್ಷದ ರಾಣ ಅವರು ಥಾನ ಭವನ್ ಕ್ಷೇತ್ರದಿಂದ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದವರಾಗಿದ್ದಾರೆ. ಈ ಹಿಂದೆ ಅವರು ಕಬ್ಬು ಅಭಿವೃದ್ಧಿ ಸಹಾಯಕ ಸಚಿವರಾಗಿದ್ದಾಗ ಮಾಡಿದ ಉತ್ತಮ ಕಾರ್ಯಕ್ಕಾಗಿ ಅವರಿಗೆ ಪದೋನ್ನತಿ ನೀಡಲಾಗಿದೆ ಎಂದು ಹೇಳಲಾಗಿದೆ.

ಇಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪೈಕಿ ಕೇವಲ ಇಬ್ಬರು ಮಹಿಳೆಯರಾಗಿದ್ದಾರೆ. ಆರು ಮಂದಿ ಬ್ರಾಹ್ಮಣ ಸಮುದಾಯದವರಾಗಿದ್ದರೆ, ತಲಾ ಇಬ್ಬರು ಠಾಕುರ್ ಹಾಗೂ ವೈಶ್ಯ ಸಮುದಾಯದವರು ಹಾಗೂ 10 ಮಂದಿ ಒಬಿಸಿ ಸಮುದಾಯದವರಾಗಿದ್ದಾರೆ.

ಅಸಮಾಧಾನಕರ ಕಾರ್ಯನಿರ್ವಹಣೆ ಹಾಗೂ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಕನಿಷ್ಠ ಆರು ಮಂದಿ ಈ ಹಿಂದಿನ ಸಚಿವರಿಗೆ ರಾಜೀನಾಮೆ ನೀಡುವಂತೆಯೂ ಹೇಳಲಾಗಿದೆ.

ಮಂಗಳವಾರ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಆರೆಸ್ಸೆಸ್ ಸಂಘಟನಾ ಸಮಿತಿ ಸಭೆಯಲ್ಲಿ ಭಾಗವಹಿಸಿದ ಬಳಿಕ  ಸಚಿವ ಸಂಪುಟ ವಿಸ್ತರಣೆಯ ನಿರ್ಧಾರ ಕೈಗೊಳ್ಳಲಾಗಿದೆ. ಮೂರು ವರ್ಷಗಳ ನಂತರ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿ ಈ ಸಂಪುಟ ವಿಸ್ತರಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News