150ನೇ ಅಂತರ್‌ರಾಷ್ಟ್ರೀಯ ಪಂದ್ಯ ವನ್ನಾಡಿದ ಲಿಲಿಮಾ ಮಿಂಝ್: ಹಾಕಿ ಇಂಡಿಯಾ ಅಭಿನಂದನೆ

Update: 2019-08-21 18:00 GMT

ಹೊಸದಿಲ್ಲಿ, ಆ.21: ದೇಶದ ಪರ 150 ಅಂತರ್‌ರಾಷ್ಟ್ರೀಯ ಹಾಕಿ ಪಂದ್ಯವನ್ನಾಡಿದ ಲಿಲಿಮಾ ಮಿಂಝ್‌ಗೆ ಬುಧವಾರ ಹಾಕಿ ಇಂಡಿಯಾ(ಎಚ್‌ಐ) ಅಭಿನಂದನೆ ಸಲ್ಲಿಸಿದೆ.

2011ರಲ್ಲಿ ಅಂತರ್‌ರಾಷ್ಟ್ರೀಯ ಹಾಕಿಗೆ ಕಾಲಿಟ್ಟಿರುವ ಮಿಂಝ್, ಟೋಕಿಯೊ ಹಾಕಿ ಸ್ಟೇಡಿಯಂನಲ್ಲಿ ನಡೆದ ಜಪಾನ್ ವಿರುದ್ಧದ ಒಲಿಂಪಿಕ್ಸ್ ಟೆಸ್ಟ್ ಇವೆಂಟ್‌ನ ಫೈನಲ್ ಪಂದ್ಯದ ವೇಳೆ ಈ ಮೈಲುಗಲ್ಲು ತಲುಪಿದರು.

‘‘ಹಾಕಿ ಇಂಡಿಯಾ ಪರವಾಗಿ ಇಂತಹ ಅದ್ಭುತ ಮೈಲುಗಲ್ಲು ತಲುಪಿದ ಲಲಿಮಾಗೆ ಅಭಿನಂದನೆ ಸಲ್ಲಿಸಲು ಬಯಸುವೆ. ಅವರು ಬದ್ಧತೆಯಿರುವ ಆಟಗಾರ್ತಿ. ಇತರ ಆಟಗಾರರಿಗೆ ಉತ್ತೇಜನ ನೀಡುವ ಗುಣ ಅವರಲ್ಲಿದೆ. ಪರಿಣಾಮಕಾರಿ ಪ್ರದರ್ಶನದ ಮೂಲಕ ಕಳೆದ ಕೆಲವು ವರ್ಷಗಳಿಂದ ಲಿಲಿಮಾ ಭಾರತ ತಂಡದಲ್ಲಿ ತನ್ನ ಸಾಮರ್ಥ್ಯ ತೋರಿದ್ದಾರೆ. ಭಾರತದ ಪ್ರಮುಖ ಗೆಲುವಿನಲ್ಲಿ ಅವರು ಭಾಗಿಯಾಗಿದ್ದಾರೆ. ಅವರಿಗೆ ಶುಭ ಹಾರೈಸುತ್ತಾ, ದೇಶಕ್ಕೆ ಇನ್ನಷ್ಟು ಹೆಮ್ಮೆ ತರುವ ನಂಬಿಕೆ ಇಟ್ಟಿದ್ದೇನೆ’’ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಮುಹಮ್ಮದ್ ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.

25ರ ಹರೆಯದ ಲಿಲಿಮಾ 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಕೊರಿಯಾದಲ್ಲಿ 2014ರಲ್ಲಿ ನಡೆದ ಇಂಚೋನ್ ಏಶ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದ ತಂಡದ ಭಾಗವಾಗಿದ್ದರು. 2016ರ ರಿಯೋ ಒಲಿಂಪಿಕ್ ಗೇಮ್ಸ್‌ನಲ್ಲೂ ದೇಶವನ್ನು ಪ್ರತಿನಿಧಿಸಿದ್ದರು.

 ‘‘ನನ್ನ ದೇಶದ ಪರ 150 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ನಿಜಕ್ಕೂ ಹೆಮ್ಮೆಯ ಕ್ಷಣ. ರೂರ್ಕೆಲಾದ ಪಾನ್‌ಪೊಶ್ ಸ್ಪೋರ್ಟ್ಸ್ ಹಾಸ್ಟೆಲ್‌ಗೆ ಸೇರಿದ ಬಳಿಕ ನನ್ನ ವೃತ್ತಿಬದುಕು ತಿರುವು ಪಡೆಯಿತು. ನನಗೆ ಸಹಾಯ ಮಾಡಿದ ಒಡಿಶಾದ ನನ್ನ ಕೋಚ್‌ಗಳಿಗೆ ಕೃತಜ್ಞತೆ ಸಲ್ಲಿಸುವೆ’’ ಎಂದು ಲಿಲಿಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News