ಕೇರಳ: ಧರ್ಮಗುರು ವಿರುದ್ಧ ದೂರು ನೀಡಿದ ಕ್ರೈಸ್ತ ಸನ್ಯಾಸಿನಿ

Update: 2019-08-22 16:27 GMT

ತಿರುವನಂತಪುರಂ, ಆ.22: ತನ್ನ ಹೆಸರು ಕೆಡಿಸುವ ಉದ್ದೇಶದಿಂದ ಧರ್ಮಗುರು ಹಾಗೂ ಐವರು ಕ್ರೈಸ್ತ ಸನ್ಯಾಸಿನಿಯರು ವೀಡಿಯೊ ದೃಶ್ಯವೊಂದನ್ನು ಪ್ರಸಾರ ಮಾಡಿದ್ದಾರೆ ಎಂದು ಕೇರಳದ ಕೈಸ್ತ ಸನ್ಯಾಸಿನಿ ಲೂಸಿ ಕಲಪ್ಪುರ ಪೊಲೀಸರಿಗೆ ದೂರು ನೀಡಿದ್ದಾರೆ.

 ಈ ಹಿನ್ನೆಲೆಯಲ್ಲಿ ವಯನಾಡ್‌ನ ಮಾನಂತವಾಡಿ ಕೈಸ್ತ ಧರ್ಮಪ್ರಾಂತ್ಯದ ಧರ್ಮಗುರು ಹಾಗೂ ಐವರು ಕ್ರೈಸ್ತ ಸನ್ಯಾಸಿನಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಯಮ ಮೀರಿದ ಜೀವನಶೈಲಿಯ ಆರೋಪದಲ್ಲಿ ಲೂಸಿ ಕಲಪ್ಪುರರನ್ನು ಕ್ರೈಸ್ತ ಧರ್ಮ ಮಂಡಲಿಯಿಂದ ಈ ತಿಂಗಳ ಆರಂಭದಲ್ಲಿ ವಜಾಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ,ಇಬ್ಬರು ವ್ಯಕ್ತಿಗಳನ್ನು ಅಡುಗೆ ಕೋಣೆಯ ಮೂಲಕ ಕಾನ್ವೆಂಟ್‌ಗೆ ಕರೆತಂದಿದ್ದಕ್ಕೆ ಲೂಸಿಯನ್ನು ಧರ್ಮಗುರು ನೋಬೆಲ್ ಟೀಕಿಸುವ ದೃಶ್ಯವಿದೆ. ಈ ವೀಡಿಯೊಗೆ ಸ್ಪಷ್ಟನೆ ನೀಡಿರುವ ಲೂಸಿ, ತಾನು ಸಮೀಪದ ಚರ್ಚ್‌ನಲ್ಲಿ ನಡೆಯುವ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳದಂತೆ ಇತರ ಕ್ರೈಸ್ತ ಸನ್ಯಾಸಿನಿಯರು ತನ್ನನ್ನು ಕಾನ್ವೆಂಟ್‌ನೊಳಗೆ ಬಂಧಿಸಿ ಹೊರಗಡೆಯಿಂದ ಬೀಗ ಜಡಿದಿದ್ದರು. ಈ ಬಗ್ಗೆ ವರದಿ ಮಾಡಲು ಇಬ್ಬರು ಪತ್ರಕರ್ತರು ಬಂದಿದ್ದರು. ಆದರೆ ಇದಕ್ಕೆ ಬೇರೆಯೇ ಅರ್ಥ ಬರುವಂತೆ ಪಾದ್ರಿ ಹಾಗೂ ಕ್ರೈಸ್ತ ಸನ್ಯಾಸಿನಿಯರು ವೀಡಿಯೊದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ದೂರಿದ್ದಾರೆ. ತನ್ನ ಚಾರಿತ್ರವಧೆ ಮಾಡುವ ಉದ್ದೇಶದಿಂದ ಈ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ. ಕಾನ್ವೆಂಟ್‌ನಿಂದ ನನ್ನನ್ನು ಹೊರದಬ್ಬಲು ಹಲವು ಪ್ರಯತ್ನ ನಡೆದಿದೆ. ಇತರ ಕ್ರೈಸ್ತ ಸನ್ಯಾಸಿನಿಯರು ನನ್ನೊಡನೆ ಮಾತನಾಡುತ್ತಿಲ್ಲ. ನನ್ನನ್ನು ದೂರ ಇರಿಸಿದ್ದಾರೆ. ನಾನು ಸಾಯುತ್ತಿದ್ದೇನೆ ಎಂಬ ಭೀತಿ ಆವರಿಸಿದೆ. ನನ್ನನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಕಾರಣ ವ್ಯಾಟಿಕನ್‌ನಿಂದ ಸೂಚನೆ ಬರುವವರೆಗೆ ಕಾನ್ವೆಂಟ್ ತೊರೆಯುವುದಿಲ್ಲ ಎಂದು ಲೂಸಿ ಹೇಳಿದ್ದಾರೆ.

ಈ ಮಧ್ಯೆ, ವೀಡಿಯೊ ಪ್ರಸಾರ ಘಟನೆಯಲ್ಲಿ ಶಾಮೀಲಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗ ಕೇರಳ ಪೊಲೀಸ್ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದೆ. ಕ್ರೈಸ್ತ ಸನ್ಯಾಸಿನಿಯನ್ನು ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿರುವ ಜಾಲಂಧರ್ ಧರ್ಮಪ್ರಾಂತ್ಯದ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ಕೊಚ್ಚಿಯಲ್ಲಿ ಕಳೆದ ವರ್ಷ ನಡೆದ ಪ್ರತಿಭಟನೆಯಲ್ಲಿ ಲೂಸಿ ಕಲಪ್ಪುರ ಕೂಡಾ ಭಾಗವಹಿಸಿದ್ದರು.

Writer - ತಿರುವನಂತಪುರಂ,

contributor

Editor - ತಿರುವನಂತಪುರಂ,

contributor

Similar News