ಜಮ್ಮು-ಕಾಶ್ಮೀರದಲ್ಲಿ ಏನೋ ಗಂಭೀರ ಸ್ಥಿತಿಯಿದೆ ಮತ್ತು ಅದನ್ನು ಮುಚ್ಚಿಡಲು ಸರಕಾರ ಯತ್ನಿಸುತ್ತಿದೆ: ಗುಲಾಂ ನಬಿ ಆಝಾದ್

Update: 2019-08-22 17:05 GMT

 ಹೊಸದಿಲ್ಲಿ,ಆ.22: ಜಮ್ಮು-ಕಾಶ್ಮೀರದಲ್ಲಿ ಏನೋ ಗಂಭೀರವಾದದ್ದು ನಡೆಯುತ್ತಿದೆ ಮತ್ತು ಅದನ್ನು ಮುಚ್ಚಿಡಲು ಸರಕಾರವು ಪ್ರಯತ್ನಿಸುತ್ತಿದೆ. ಸತ್ಯವನ್ನು ಟಿವಿಯಲ್ಲಿ ಬಿತ್ತರಿಸಲು ಮಾಧ್ಯಮಗಳಿಗೆ ಅವಕಾಶ ನೀಡಲಾಗಿಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರು ಗುರುವಾರ ಇಲ್ಲಿ ಹೇಳಿದರು.

ಕಾಶ್ಮೀರದಲ್ಲಿ ಬಂಧಿಸಲಾಗಿರುವ ರಾಜಕೀಯ ನಾಯಕರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂಬ ಬೇಡಿಕೆಯೊಂದಿಗೆ ಡಿಎಂಕೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವವು ಅಸ್ತಿತ್ವವನ್ನು ಕಳೆದುಕೊಂಡಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ಇದನ್ನು ತಿಳಿದುಕೊಳ್ಳಲು ನಾವು ವಿಫಲರಾದರೆ ನಾವು ಮೂರ್ಖರ ಸ್ವರ್ಗದಲ್ಲಿ ವಾಸವಾಗಿದ್ದೇವೆ ಎಂದೇ ಅರ್ಥ ಎಂದ ಅವರು,ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ವಿಧಿ 370ನ್ನು ರದ್ದುಗೊಳಿಸಲು ಹಿಂಬಾಗಿಲಿನಿಂದ ಕಾನೂನು ತರಲಾಗಿದೆ ಎಂದರು.

 ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಉಲ್ಲೇಖಿಸಿದ ಆಝಾದ್,ಅವರು ಪ್ರಧಾನ ಹುದ್ದೆಯಲ್ಲಿದ್ದರೆ ಇಂತಹ ಬೆಳವಣಿಗೆ ನಡೆಯುತ್ತಿರಲಿಲ್ಲ ಎಂದರು. ಇದಕ್ಕೂ ಮುನ್ನ ಮಾತನಾಡಿದ್ದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರೂ ವಾಜಪೇಯಿಯವರನ್ನು ಉಲ್ಲೇಖಿಸಿದರು. ಜಮ್ಮು-ಕಾಶ್ಮೀರದ ಸ್ಥಾನಮಾನದಲ್ಲಿ ಬದಲಾವಣೆಯು ಸಂವಿಧಾನದ ಎಲ್ಲ ಸ್ತಂಭಗಳ ಮೇಲಿನ ನೇರ ದಾಳಿಯಾಗಿದೆ ಎಂದ ಅವರು,ವಾಜಪೇಯಿಯವರ ‘ಕಾಶ್ಮೀರಿಯತ್, ಜಮೂರಿಯತ್ ಮತ್ತು ಇನ್ಸಾನಿಯತ್ ’ ಘೋಷಣೆಯನ್ನು ಸರಕಾರವು ಮರೆತಿದೆ ಎಂದು ಹೇಳಿದರು.

ಕಾಂಗ್ರೆಸ್,ಟಿಎಂಸಿ ಸೇರಿದಂತೆ ಒಂಭತ್ತು ಪ್ರತಿಪಕ್ಷಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು,ರಾಜಕೀಯ ಪಕ್ಷಗಳ ನಾಯಕರು ಮತ್ತು ಅಮಾಯಕ ಪ್ರಜೆಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು,ರಾಜ್ಯದಲ್ಲಿ ಸಹಜತೆ ಮತ್ತು ಸಂಪರ್ಕ ವ್ಯವಸ್ಥೆಗಳನ್ನು ತಕ್ಷಣ ಸ್ಥಾಪಿಸಬೇಕು ಎಂದು ಆಗ್ರಹಿಸುವ ನಿರ್ಣಯವನ್ನು ಅಂಗೀಕರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News