ಉಗ್ರರಿಗೆ ಆರ್ಥಿಕ ನೆರವು ಆರೋಪ: ಮಧ್ಯಪ್ರದೇಶದಲ್ಲಿ ಮೂವರ ಬಂಧನ
ಭೋಪಾಲ, ಆ.22: ಉಗ್ರರಿಗೆ ಆರ್ಥಿಕ ನೆರವು ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ಸಾತ್ನ ಜಿಲ್ಲೆಯಲ್ಲಿ ಭಯೋತ್ಪಾದನಾ ನಿಗ್ರಹ ದಳದವರು ಮೂವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಭಯೋತ್ಪಾದನಾ ನಿಗ್ರಹ ದಳದ ಆದೇಶದಂತೆ ಬುಧವಾರ ರಾತ್ರಿ ಸಾತ್ನ ಜಿಲ್ಲಾ ಪೊಲೀಸ್‌ನ ಅಪರಾಧ ಪತ್ತೆ ದಳದವರು ಐವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಇವರಲ್ಲಿ ಮೂವರನ್ನು(ಬಲರಾಮ್ ಸಿಂಗ್, ಸುನಿಲ್ ಸಿಂಗ್ ಮತ್ತು ಶುಭಂ ತಿವಾರಿ) ಬಂಧಿಸಲಾಗಿದೆ. ಉಳಿದ ಇಬ್ಬರ ವಿಚಾರಣೆ ಮುಂದುವರಿದಿದೆ.
ವಶಕ್ಕೆ ಪಡೆದಿರುವ ವ್ಯಕ್ತಿಗಳಿಗೆ ಇಂದೋರ್ ಹಾಗೂ ಭೋಪಾಲ್‌ನಲ್ಲಿ ಕೆಲವರ ಜೊತೆ ಸಂಪರ್ಕವಿದೆ ಎಂದು ಪೊಲೀಸರು ಹೇಳಿದ್ದಾರೆ. ವಶಕ್ಕೆ ಪಡೆದಿರುವ ಐದೂ ವ್ಯಕ್ತಿಗಳ ಮೊಬೈಲ್ ಫೋನ್‌ಗಳು ಪಾಕಿಸ್ತಾನದ ನಂಬರ್ ಹೊಂದಿದ್ದವು. ಇಂತಹ ಕನಿಷ್ಟ 15 ನಂಬರ್‌ಗಳೊಂದಿಗೆ ವಾಟ್ಸಾಪ್ ಮೂಲಕ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ತನ್ನ ನೆಲದಲ್ಲಿ ನಿಂತು ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ 2019ರ ಅಕ್ಟೋಬರ್ ಒಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದೇಶವನ್ನು ಕಪ್ಪುಪಟ್ಟಿ(ಬ್ಲಾಕ್‌ಲಿಸ್ಟ್)ಗೆ ಸೇರಿಸಲಾಗುವುದು ಎಂದು ಜಾಗತಿಕ ಸಂಸ್ಥೆ ‘ದಿ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್’ (ಎಫ್‌ಎಟಿಎಫ್) ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ನೀಡಿರುವುನ್ನು ಇಲ್ಲಿ ಉಲ್ಲೇಖಿಸಬಹುದು.