ಶ್ರೀಕಾಂತ್, ಸೆನಾ, ಮೂರನೇ ಸುತ್ತಿಗೆ

Update: 2019-08-22 18:15 GMT

►ಪ್ರಣಯ್‌ಗೆ ಸೋಲು

ಬಾಸೆಲ್, ಆ.22: ಇಲ್ಲಿ ನಡೆಯುತ್ತಿರುವ ಬಿಡಬ್ಲುಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್‌ನಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರರಾದ ಕಿಡಂಬಿ ಶ್ರೀಕಾಂತ್ ಮತ್ತು ಪಿ.ವಿ.ಸಿಂಧು ಮೂರನೇ ಸುತ್ತು ಪ್ರವೇಶಿಸಿದ್ದಾರೆ.

   ಬುಧವಾರ ತಡ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಕೆ.ಶ್ರೀಕಾಂತ್ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಮೂರನೇ ಸುತ್ತು ತಲುಪಿದರು. ಇದಕ್ಕೂ ಮೊದಲು ಪಿ. ವಿ.ಸಿಂಧು ಚೈನಾ ತೈಪೆಯ ಪೈ ಯು ಪೊ ಅವರನ್ನು 21-14, 21-15 ಅಂತರದಲ್ಲಿ ಮಣಿಸಿ ಮೂರನೇ ಸುತ್ತಿಗೆ ತೇರ್ಗಡೆಯಾದರು. ಇದರೊಂದಿಗೆ ಭಾರತದ ಆಟಗಾರರು ವರ್ಲ್ಡ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ.

 ಪುರುಷರ ಸಿಂಗಲ್ಸ್‌ನಲ್ಲಿ ಇದೇ ವೇಳೆ ಎಚ್.ಎಸ್ ಪ್ರಣಯ್ ಅವರು ಜಪಾನ್‌ನ ನಂ.1 ಕೆಂಟೊ ಮೊಮೊಟೊ ವಿರುದ್ಧ 19-21 , 12-21 ಅಂತರದಲ್ಲಿ ಸೋಲು ಅನುಭವಿಸಿದರು. ಸೈನಾ ನೆಹ್ವಾಲ್ ನೆದರ್‌ಲ್ಯಾಂಡ್‌ನ ಸೋರಾಯ ಡಿ ವಿಶ್ ಐಜ್ಬೆರ್ಗೆನ್ ಅವರನ್ನು 21-10, 21-11 ಅಂತರದಲ್ಲಿ ಮಣಿಸಿದರು. ಸೈನಾ ಕೇವಲ 33 ನಿಮಿಷಗಳಲ್ಲಿ ಎದುರಾಳಿಗೆ ಆಘಾತ ನೀಡಿದರು.

ಹನ್ನೆರಡನೇ ಶ್ರೇಯಾಂಕದ ಭಾರತದ ತಾರೆ ಸೈನಾ ನೆಹ್ವಾಲ್ ಅವರು ಮುಂದಿನ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮಿಯಾ ಬಿಲಿಚ್‌ಫೀಲ್ಡ್ ರನ್ನು ಎದುರಿಸುವರು.

 ಕೆ. ಶ್ರೀಕಾಂತ್ ಅವರು ಇಸ್ರೇಲ್‌ನ ಮಿಶಾ ಝಿಲ್ಬೆರ್‌ಮ್ಯಾನ್‌ರನ್ನು 13-21, 21-13, 21-16 ಅಂತರದಲ್ಲಿ ಬಗ್ಗು ಬಡಿದರು. 57 ನಿಮಿಷಗಳಲ್ಲಿ ಶ್ರೀಕಾಂತ್ ಎದುರಾಳಿಗೆ ಸೋಲುಣಿಸಿದರು. ಮೂರನೇ ಸುತ್ತಿನಲ್ಲಿ ಶ್ರೀಕಾಂತ್‌ಗೆ ಥಾಯ್ಲೆಂಡ್‌ನ ಕಾಂಟಾಫೋನ್ ವಾಂಗ್‌ಚರೊಯನ್ ಸವಾಲು ಎದುರಾಗಲಿದೆ.

   ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಸವಾಲು ಕೊನೆಗೊಂಡಿದೆ. ಚೀನಾದ ಡು ಯ್ಯೂ ಮತ್ತು ಲಿ ಯಿನ್ ಹ್ಯೂ ವಿರುದ್ಧ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ 20-12, 16-21 ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಜಕ್ಕಂಪುಡಿ ಮೇಘನಾ ಮತ್ತು ಪೂರ್ವಿಶಾ ಎಸ್ ರಾಮ್ ಅವರು ಜಪಾನ್‌ನ ಶಿಹೊ ತಾಂಕಾ ಮತ್ತು ಕೊಹಾರು ಯೊನೆಮೊಟೊ ವಿರುದ್ಧ 8-21, 18-21 ಅಂತರದಲ್ಲಿ ಸೋಲು ಅನುಭವಿಸಿದರು.

ಪುರುಷರ ಡಬಲ್ಸ್‌ನಲ್ಲೂ ಭಾರತ ಸೋಲು ಅನುಭವಿಸಿದೆ. ಮನು ಅತ್ರಿ ಮತ್ತು ಸುಮಿತ್‌ರೆಡ್ಡಿ ಅವರು ಚೀನಾದ ಹ್ಯಾನ್ ಚೆಂಗ್ ಕಾಯ್ ಮತ್ತು ಝೌ ಹಾವೊ ಡೊಂಗ್‌ಗೆ 16-21, 19-21 ಅಂತರದಲ್ಲಿ ಶರಣಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News