ಸತತ ಮೂರನೇ ಬಾರಿ ಫೈನಲ್‌ಗೆ ಸಿಂಧು ತೇರ್ಗಡೆ

Update: 2019-08-24 18:12 GMT

ಬಾಸೆಲ್, ಆ.24: ಆಲ್ ಇಂಗ್ಲೆಂಡ್ ಚಾಂಪಿಯನ್ ಚೆನ್ ಯು ಫೀ ವಿರುದ್ಧ ನೇರ ಗೇಮ್‌ಗಳ ಅಂತರದಿಂದ ಜಯ ಸಾಧಿಸಿರುವ ಭಾರತದ ಪಿ.ವಿ.ಸಿಂಧು ಬಿಡಬ್ಲುಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸತತ ಮೂರನೇ ಬಾರಿ ಫೈನಲ್‌ಗೆಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಶನಿವಾರ 40 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಸಿಂಧು ಚೀನಾದ ಚೆನ್‌ರನ್ನು 21-7, 21-14 ನೇರ ಗೇಮ್‌ಗಳಿಂದ ಸೋಲಿಸಿದರು. *ಚೊಚ್ಚಲ ಪ್ರಶಸ್ತಿ ನಿರೀಕ್ಷೆ: 

ಪ್ರತಿಷ್ಠಿತ ಟೂರ್ನಮೆಂಟ್‌ನ ಕಳೆದ ಎರಡು ಆವೃತ್ತಿಗಳಲ್ಲಿ ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು. 2018ರಲ್ಲಿ ಸ್ಪೇನ್‌ನ ಕರೊಲಿನಾ ಮರಿನ್ ಹಾಗೂ 2017ರಲ್ಲಿ ಜಪಾನ್‌ನ ನೊರೊಮಿ ಒಕುಹರಾ ವಿರುದ್ಧ ಫೈನಲ್ ಪಂದ್ಯವನ್ನು ಸೋತಿದ್ದರು. ಇದೀಗ ವಿಶ್ವದ ನಂ.3ನೇ ಆಟಗಾರ್ತಿ ಚೆನ್‌ರನ್ನು ಸದೆಬಡಿದಿರುವ ಸಿಂಧು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ. 24ರ ಹರೆಯದ ಹೈದರಾಬಾದ್ ಆಟಗಾರ್ತಿ ರವಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 2013ರ ವಿಶ್ವ ಚಾಂಪಿಯನ್ ರಚನೊಕ್ ಇಂತನಾನ್ ಅಥವಾ 2017ರ ಚಾಂಪಿಯನ್, ಜಪಾನ್‌ನ ನೊರೊಮಿ ಒಕುಹರಾ ಅವರ ಸವಾಲನ್ನು ಎದುರಿಸಲಿದ್ದಾರೆ.

ಇಂದಿನ ಪಂದ್ಯಕ್ಕಿಂತ ಮೊದಲು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸಿಂಧು, ಚೆನ್ ವಿರುದ್ಧ ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿ ಹೆಡ್-ಟು-ಹೆಡ್ ದಾಖಲೆಯಲ್ಲಿ ಮೇಲುಗೈ ಸಾಧಿಸಿದ್ದರು. ಇಂದು ಆರನೇ ಗೆಲುವಿನಿಂದ ಬೀಗಿದರು.

 ಸಿಂಧು ಮೊದಲ ಸೆಮಿ ಫೈನಲ್‌ನ ಮೊದಲ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದು ಕೇವಲ 15 ನಿಮಿಷಗಳಲ್ಲಿ ಮೊದಲ ಗೇಮ್‌ನ್ನು 21-7 ಅಂತರದಿಂದ ಗೆದ್ದುಕೊಂಡರು. ಚೀನಾ ಆಟಗಾರ್ತಿ ಚೆನ್ 2ನೇ ಗೇಮ್‌ನಲ್ಲಿ ಒಂದಷ್ಟು ಪ್ರತಿರೋಧ ಒಡ್ಡಿದರು. ತನ್ನ ಎತ್ತರದ ಸಂಪೂರ್ಣ ಲಾಭ ಎತ್ತಿದ ನೀಳಕಾಯದ ಸಿಂಧು ಎರಡನೇ ಗೇಮ್‌ನ್ನು 21-14 ಅಂತರದಿಂದ ವಶಪಡಿಸಿಕೊಂಡು ಗೆಲುವಿನ ನಗೆ ಬೀರಿದರು.

*5ನೇ ಪದಕ ದೃಢಪಡಿಸಿದ ಸಿಂಧು: ಶುಕ್ರವಾರ ಸೆಮಿ ಫೈನಲ್‌ಗೆ ತಲುಪಿದ್ದ ಸಿಂಧು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 5ನೇ ಪದಕವನ್ನು ದೃಢಪಡಿಸಿದ್ದರು. ಸಿಂಧು ಈ ತನಕ 2 ಕಂಚು ಹಾಗೂ 2 ಬೆಳ್ಳಿ ಪದಕವನ್ನು ಜಯಿಸಿದ್ದಾರೆ. 2013ರಲ್ಲಿ ತನ್ನ 18ನೇ ವಯಸ್ಸಿನಲ್ಲಿ ಕಂಚಿನ ಪದಕ ಜಯಿಸಿದ್ದ ಸಿಂಧು ಮರು ವರ್ಷ 2014ರಲ್ಲಿ ಮತ್ತೊಮ್ಮೆ ಕಂಚಿಗೆ ತೃಪ್ತಿಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News