ಇಶಾಂತ್‌ಗೆ ಐದು ವಿಕೆಟ್: ವಿಂಡೀಸ್ ಆಲೌಟ್

Update: 2019-08-24 18:17 GMT

 ನಾರ್ತ್ ಸೌಂಡ್(ಆ್ಯಂಟಿಗುವಾ), ಆ.24: ವೇಗದ ಬೌಲರ್ ಇಶಾಂತ್ ಶರ್ಮಾ ನೇತೃತ್ವದಲ್ಲಿ ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಭಾರತ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 222 ರನ್‌ಗೆ ಆಲೌಟ್ ಮಾಡಿದೆ. ಇದರೊಂದಿಗೆ ಮೊದಲ ಇನಿಂಗ್ಸ್ ನಲ್ಲಿ 75 ರನ್ ಮುನ್ನಡೆ ಪಡೆಯಲು ಶಕ್ತವಾಗಿದೆ.

ಮೂರನೇ ದಿನದಾಟವಾದ ಶನಿವಾರ 8 ವಿಕೆಟ್‌ಗಳ ನಷ್ಟಕ್ಕೆ 189 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ವಿಂಡೀಸ್ ಕೇವಲ 15.2 ಓವರ್‌ಗಳ ಪಂದ್ಯ ಆಡುವಷ್ಟರಲ್ಲಿ ಕೊನೆಯ 2 ವಿಕೆಟ್‌ಗಳನ್ನು ಕಳೆದುಕೊಂಡಿತು. ಔಟಾಗದೆ 10 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಿಂಡೀಸ್ ನಾಯಕ ಹೋಲ್ಡರ್ 39 ರನ್(65 ಎಸೆತ, 5 ಬೌಂಡರಿ)ಗಳಿಸಿ ವಿಕೆಟ್ ಒಪ್ಪಿಸಿದರು.

ಇಶಾಂತ್ ಯಶಸ್ವಿ ಬೌಲರ್(5-43) ಎನಿಸಿಕೊಂಡರು. ತಲಾ ಎರಡು ವಿಕೆಟ್ ಪಡೆದ ಮುಹಮ್ಮದ್ ಶಮಿ(2-48)ಹಾಗೂ ರವೀಂದ್ರ ಜಡೇಜ(2-64)ಇಶಾಂತ್‌ಗೆ ಸಾಥ್ ನೀಡಿದರು.

ವೆಸ್ಟ್‌ಇಂಡೀಸ್ 2ನೇ ದಿನದಾಟವಾದ ಶುಕ್ರವಾರ ಕೊನೆಯ ಅವಧಿಯಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು 8 ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ 9ನೇ ಬಾರಿ ಐದು ವಿಕೆಟ್ ಗೊಂಚಲು(5-43) ಪಡೆದ ಇಶಾಂತ್ ಸರ್ ವಿವಿಯನ್ ರಿಚರ್ಡ್ಸ್‌ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಸುಸ್ಥಿತಿಗೆ ತಲುಪಲು ನೆರವಾದರು.

ರೋಸ್ಟನ್ ಚೇಸ್(48 ರನ್, 74 ಎಸೆತ), ಜಾನ್ ಕ್ಯಾಂಪ್‌ಬೆಲ್(23 ರನ್, 30 ಎಸೆತ), ಡರೆನ್ ಬ್ರಾವೊ(18 ರನ್, 27 ಎಸೆತ), ಶೈ ಹೋಪ್(24 ರನ್, 65 ಎಸೆತ) ಹಾಗೂ ಶಿಮ್ರಾನ್ ಹೆಟ್ಮೆಯರ್(35, 47 ಎಸೆತ)ಉತ್ತರ ಆರಂಭ ಪಡೆದರೂ ಬೇಗನೆ ವಿಕೆಟ್ ಕೈಚೆಲ್ಲುವುದರೊಂದಿಗೆ ಪರೋಕ್ಷವಾಗಿ ಭಾರತ ಮೇಲುಗೈ ಸಾಧಿಸಲು ನೆರವಾದರು.

ಇದಕ್ಕೂ ಮೊದಲು ಆರು ವಿಕೆಟ್‌ಗಳ ನಷ್ಟಕ್ಕೆ 203 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ರವೀಂದ್ರ ಜಡೇಜರ ಹೋರಾಟಕಾರಿ ಅರ್ಧಶತಕ(58)ಸಹಾಯದಿಂದ 297 ರನ್ ಗಳಿಸಿತು.

ಜಡೇಜಗೆ ಉತ್ತಮ ಸಾಥ್ ನೀಡಿದ ಇಶಾಂತ್ ಶರ್ಮಾ 8ನೇ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿ ತಂಡದ ಮೊತ್ತವನ್ನು 300ರ ಗಡಿ ತಲುಪಿಸಿದರು. ವಿಂಡೀಸ್‌ನ ಪರ ಗ್ಯಾಬ್ರಿಯಲ್(3-71) ಹಾಗೂ ಕೆಮರ್ ರೋಚ್(4-66)ಏಳು ವಿಕೆಟ್ ಪಡೆದರು. ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ297 ರನ್‌ಗೆ ನಿಯಂತ್ರಿಸಿದ ವಿಂಡೀಸ್‌ನ ಆಟಗಾರರು ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಕ್ರೀಸ್‌ಗೆ ಅಂಟಿಕೊಂಡು ಆಡಲು ವಿಫಲರಾದರು. ಇಶಾಂತ್ ಬ್ಯಾಟ್ ಹಾಗೂ ಬಾಲ್‌ನಲ್ಲಿ ವಿಂಡೀಸ್‌ಗೆ ಸಿಂಹಸ್ವಪ್ನರಾದರು. ಆರಂಭಿಕ ಆಟಗಾರ ಕ್ರೆಗ್ ಬ್ರಾತ್‌ವೇಟ್(14) ಹಾಗೂ ಮಧ್ಯಮ ಕ್ರಮಾಂಕದ ದಾಂಡಿಗ ಹೆಟ್ಮೆಯರ್(35) ಅವರನ್ನು ರಿಟರ್ನ್ ಕ್ಯಾಚ್ ಪಡೆಯುವ ಮೂಲಕ ಔಟ್ ಮಾಡಿ ಗಮನ ಸೆಳೆದರು.

ಟೀ ವಿರಾಮದ ವೇಳೆಗೆ 82 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ ಸಂಕಷ್ಟದಲ್ಲಿತ್ತು. ಕ್ಷಿಪ್ರಗತಿಯಲ್ಲಿ ಅರ್ಧಶತಕ ಸಿಡಿಸಿದ ಬಳಿಕ ಬೌಲಿಂಗ್‌ನಲ್ಲೂ ಕೈಚಳಕ ತೋರಿದ ಜಡೇಜ ಚೊಚ್ಚಲ ಪಂದ್ಯ ಆಡಿದ ಬ್ರೂಕ್ಸ್(11) ವಿಕೆಟ್ ಉರುಳಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಕ್ಯಾಂಪ್‌ಬೆಲ್(23) ವಿಕೆಟನ್ನು ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಉರುಳಿಸಿದ ಮುಹಮ್ಮದ್ ಶಮಿ ಭಾರತಕ್ಕೆ ಆರಂಭಿಕ ಮೇಲುಗೈ ಒದಗಿಸಿದರು.

ಬ್ರಾವೊ(18)ರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದ ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರೈಸಿದರು. ವಿಂಡೀಸ್ ಪರ 2ನೇ ದಿನದಾಟದಲ್ಲಿ ಅಗ್ರ ಸ್ಕೋರರ್ ಎನಿಸಿಕೊಂಡ ಚೇಸ್ 48 ರನ್ ಗಳಿಸಿ ಇಶಾಂತ್ ಶರ್ಮಾಗೆ ಔಟಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News