ಅರುಣ್ ಜೇಟ್ಲಿ ನಿಧನಕ್ಕೆ ಕ್ರೀಡಾವಲಯದ ಶೋಕ

Update: 2019-08-24 18:18 GMT

ಹೊಸದಿಲ್ಲಿ, ಆ.24: ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ದೇಶದ ಪ್ರಮುಖ ಕ್ರೀಡಾಪಟುಗಳು ಸಾಮಾಜಿಕ ಜಾಲತಾಣದ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ.

 ಜೇಟ್ಲಿ ಈ ಹಿಂದೆ ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಜೇಟ್ಲಿ ನಿಧನಕ್ಕೆ ಶೋಕಸಂದೇಶವನ್ನು ಬಿಡುಗಡೆ ಮಾಡಿರುವ ಬಿಸಿಸಿಐ,‘‘ಜೇಟ್ಲಿ ಕ್ರಿಕೆಟ್ ಪ್ರಿಯರಾಗಿದ್ದರು ಹಾಗೂ ಅತ್ಯಂತ ದಕ್ಷ ಹಾಗೂ ಗೌರವಾನ್ವಿತ ಕ್ರಿಕೆಟ್ ಆಡಳಿತಾಧಿಕಾರಿಯಾಗಿದ್ದರು. ಡಿಡಿಸಿಎಯಲ್ಲಿ ದೀರ್ಘ ಸಮಯ ಅಧ್ಯಕ್ಷರಾಗಿದ್ದ ಅವರು ಕ್ರಿಕೆಟ್ ಮೂಲಸೌಕರ್ಯದಲ್ಲಿ ಭಾರೀ ಬದಲಾವಣೆ ತಂದಿದ್ದರು. ಕ್ರಿಕೆಟಿಗರ ಆತ್ಮೀಯ ಸ್ನೇಹಿತರಾಗಿದ್ದ ಅವರು ಯಾಗಾಗಲೂ ಅವರ ಬೆನ್ನಿಗೆ ನಿಂತು ಹುರಿದುಂಬಿಸುತ್ತಿದ್ದರು. ಜೇಟ್ಲಿ ಕುಟುಂಬದೊಂದಿಗೆ ಬಿಸಿಸಿಐ ನೋವನ್ನು ಹಂಚಿಕೊಳ್ಳಲಿದ್ದು, ಅವರ ಆತ್ಮಕ್ಕೆ ಶಾಂತಿ ಕೋರುತ್ತಿದೆ’’ಎಂದು ಟ್ವೀಟಿಸಿದೆ.

‘‘ಜೇಟ್ಲಿ ಸಾವಿನ ಸುದ್ದಿ ಕೇಳಿ ಬೇಸರವಾಯಿತು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ’’ ಎಂದು ಕ್ರಿಕೆಟಿಗ ಶಿಖರ್ ಧವನ್ ಟ್ವೀಟ್ ಮಾಡಿದ್ದರು. ‘‘ಜೇಟ್ಲಿ ಓರ್ವ ತಜ್ಞರು, ಕ್ರಿಕೆಟ್ ಪ್ರಿಯರು. ಅಂಡರ್-19ರಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಂಡಿದ್ದರು. ನಿಮ್ಮ ಅಗಲಿಕೆಯಿಂದ ವಿಶ್ವವೇ ಬಡವಾಗಿದೆ’’ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.

‘‘ಸಾರ್ವಜನಿಕ ಜೀವನದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಜೇಟ್ಲಿ ದಿಲ್ಲಿಯ ಹಲವು ಆಟಗಾರರು ಭಾರತವನ್ನು ಪ್ರತಿನಿಧಿಸಲು ಅವಕಾಶ ನೀಡಿದ್ದರು. ಒಂದು ಸಮಯದಲ್ಲಿ ದಿಲ್ಲಿಯ ಆಟಗಾರರು ಉನ್ನತಮಟ್ಟದಲ್ಲಿ ಅವಕಾಶವಂಚಿತರಾಗಿದ್ದರು’’ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಸರ್ ನಿಧನದ ಸುದ್ದಿ ಕೇಳಿ ವಿಚಲಿತನಾದೆ. ನಾವು ಓರ್ವ ಉತ್ತಮ ನಾಯಕನನ್ನು ಕಳೆದುಕೊಂಡಿದ್ದೇವೆ ಎಂದು ಕುಸ್ತಿಪಟು ಬಬಿತಾ ಫೋಗಾಟ್ ಟ್ವೀಟ್ ಮಾಡಿದ್ದಾರೆ.

  ಮಾಜಿ ಆರಂಭಿಕ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್ ಕೂಡ ಜೇಟ್ಲಿ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News