ಜನಾರ್ಧನ ರೆಡ್ಡಿಗೆ ಜಾಮೀನು ನೀಡಲು 40 ಕೋಟಿ ರೂ. ಆಫರ್: ಮಾಜಿ ಸಿಬಿಐ ನ್ಯಾಯಾಧೀಶರ ಆರೋಪ
ಹೈದರಾಬಾದ್,ಆ.27: “ಗಣಿ ಉದ್ಯಮಿ ಗಾಲಿ ಜನಾರ್ಧನ ರೆಡ್ಡಿಗೆ ಜಾಮೀನು ನೀಡಲು ನನಗೆ 40 ಕೋಟಿ ರೂ. ಕೊಡುಗೆ ನೀಡಲಾಗಿತ್ತು” ಎಂದು ಮಾಜಿ ಸಿಬಿಐ ವಿಶೇಷ ನ್ಯಾಯಾಧೀಶ ಬಿ. ನಾಗಮಾರುತಿ ಸರ್ಮಾ ತಿಳಿಸಿದ್ದಾರೆ.
ಕುಖ್ಯಾತ ಜಾಮೀನಿಗಾಗಿ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿಯ ನ್ಯಾಯಾಲಯದ ಮುಖ್ಯ ವಿಶೇಷ ನ್ಯಾಯಾಧೀಶರ ಮುಂದೆ ಸೋಮವಾರ ತನ್ನ ಹೇಳಿಕೆಯನ್ನು ದಾಖಲಿಸುವ ವೇಳೆ ಶರ್ಮಾ ಈ ಆರೋಪವನ್ನು ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶರ್ಮಾ ಅವರ ಉತ್ತರಾಧಿಕಾರಿ ಟಿ.ಪಟ್ಟಾಭಿರಾಮ ರಾವ್ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಿಕ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಈ ಕೊಡುಗೆಯನ್ನು 2012ರ ಎಪ್ರಿಲ್‌ನಲ್ಲಿ ರೆಡ್ಡಿಯ ಪರವಾಗಿ ಆಂಧ್ರ ಪ್ರದೇಶ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ (ವಿಚಾರಣೆಗಳು) ಕೆ.ಲಕ್ಷ್ಮಿ ನರಸಿಂಹ ರಾವ್ ಅವರು ಮಾಡಿದ್ದರು.
ಆ ಸಮಯದಲ್ಲಿ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಚಂಚಲಗುಡ ಜೈಲಿನಲ್ಲಿ ಬಂಧಿಯಾಗಿದ್ದರು. ಈ ಕುರಿತು ತನ್ನ ಹೇಳಿಕೆ ನೀಡಿರುವ ಶರ್ಮಾ, “ನಾನು ಈ ಕೊಡುಗೆಯನ್ನು ನೇರವಾಗಿ ತಿರಸ್ಕರಿಸಿದ್ದೆ ಮತ್ತು ರಿಜಿಸ್ಟ್ರಾರ್ ಅವರ ನಿವಾಸದಿಂದ ವಾಪಸ್ ತೆರಳಿದ್ದೆ” ಎಂದು ತಿಳಿಸಿದ್ದಾರೆ. ಶರ್ಮಾ ಅವರ ಮುಂದೆ ಬಾಕಿಯಿದ್ದ ರೆಡ್ಡಿ ಜಾಮೀನು ಮನವಿಯನ್ನು ಅವರು ತಿರಸ್ಕರಿಸಿದ್ದರು.
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಗಾಲಿ ಜನಾರ್ಧನ ರೆಡ್ಡಿಯನ್ನು ಸಿಬಿಐ 2011ರ ಸೆಪ್ಟೆಂಬರ್‌ನಲ್ಲಿ ಬಂಧಿಸಿತ್ತು. ಸದ್ಯ ಈ ಪ್ರಕಣದ ವಿಚಾರಣೆ ಅಂತಿಮ ಹಂತಕ್ಕೆ ತಲುಪಿದೆ ಮತ್ತು ಸರ್ಮಾರ ಹೇಳಿಕೆಯನ್ನು ದಾಖಲಿಸಿರುವ ಎಸಿಬಿ ವಿಶೇಷ ನ್ಯಾಯಾಲಯ (ಹೈದರಾಬಾದ್) ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 13ಕ್ಕೆ ನಿಗದಿಪಡಿಸಿದೆ.