ಸೆರೆನಾಗೆ ಶರಪೋವಾ ಶರಣು
ನ್ಯೂಯಾರ್ಕ್, ಆ.27: ಅತ್ಯಂತ ಕುತೂಹಲ ಕೆರಳಿಸಿದ್ದ ಅಮೆರಿಕನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆ ರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ರಶ್ಯದ ಅನುಭವಿ ಆಟಗಾರ್ತಿ ಮರಿಯಾ ಶರಪೋವಾರನ್ನು 6-1, 6-1 ನೇರ ಸೆಟ್‌ಗಳಿಂದ ಮಣಿಸಿದರು. 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಸರೆನಾ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
ಕಳೆದ ವರ್ಷ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಜಪಾನ್‌ನ ನವೊಮಿ ಒಸಾಕಾಗೆ ಸೋಲುವ ಮೊದಲು ಚೇರ್ ಅಂಪೈರ್‌ರೊಂದಿಗೆ ವಾಗ್ವಾದ ನಡೆಸಿ ವಿವಾದ ಸೃಷ್ಟಿಸಿದ್ದ ಸೆರೆನಾ ಇದೀಗ ಯುಎಸ್ ಓಪನ್‌ಗೆ ವಾಪಸಾಗಿದ್ದಾರೆ. ಟೆನಿಸ್‌ನ ದಿಗ್ಗಜ ಆಟಗಾರ್ತಿಯರಾದ ಸೆರೆನಾ ಹಾಗೂ ಶರಪೋವಾ ಇದೇ ಮೊದಲ ಬಾರಿ ನ್ಯೂಯಾರ್ಕ್‌ನಲ್ಲಿ ಮುಖಾಮುಖಿಯಾದರು.
ಎರಡು ವಾರಗಳ ಹಿಂದೆ ಟೊರೊಂಟೊ ಫೈನಲ್‌ನಲ್ಲಿ ಬೆನ್ನುನೋವು ಕಾಣಿಸಿಕೊಂಡ ಗಾಯಗೊಂಡು ನಿವೃತ್ತಿಯಾಗಿದ್ದ ಸೆರೆನಾ ಸೋಮವಾರ ನಡೆದ ಪಂದ್ಯದಲ್ಲಿ ಎಲ್ಲಿಯೂ ಕೂಡ ನೋವನ್ನು ತೋರ್ಪಡಿಸದೇ ಉತ್ತಮ ಪ್ರದರ್ಶನ ನೀಡಿದರು.
2004ರ ವಿಂಬಲ್ಡನ್ ಫೈನಲ್‌ನಲ್ಲಿ ಸೆರೆನಾ ವಿರುದ್ಧ ಶರಪೋವಾ ಗೆಲುವು ಸಾಧಿಸಿದ ಬಳಿಕ ಇಬ್ಬರ ನಡುವೆ ವೈರತ್ವ ಆರಂಭವಾಗಿತ್ತು. ಆ ವೈರತ್ವ ಈಗಲೂ ಮುಂದುವರಿದಿದೆ.
ಫೆಬ್ರವರಿಯಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರಶ್ಯದ ಶರಪೋವಾ ರ್ಯಾಂಕಿಂಗ್‌ನಲ್ಲಿ 87ನೇ ಸ್ಥಾನಕ್ಕೆ ಕುಸಿದಿದ್ದಾರೆ. 2016ರ ಆಸ್ಟ್ರೇಲಿಯನ್ ಓಪನ್‌ನ ಬಳಿಕ 37ರ ಹರೆಯದ ಸೆರೆನಾ ಮೊದಲ ಬಾರಿ ಶರಪೋವಾರನ್ನು ಎದುರಿಸಿದ್ದಾರೆ.
ಸೆರೆನಾ ಮುಂದಿನ ಸುತ್ತಿನಲ್ಲಿ ಅಮೆರಿಕದ ವೈಲ್ಡ್‌ಕಾರ್ಡ್ ಆಟಗಾರ್ತಿ ಕಥರಿನ್ ಮೆಕ್‌ನಲ್ಲಿ ಅವರನ್ನು ಎದುರಿಸಲಿದ್ದಾರೆ. ಮೆಕ್‌ನಲ್ಲಿ ಸ್ವಿಸ್‌ನ ಟಿಮಿಯಾ ಬಾಸಿನ್‌ಸ್ಕಿ ಅವರನ್ನು 6-4, 6-1 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
► ಬೇಗನೆ ನಿರ್ಗಮಿಸಿದ ಬೌಚರ್ಡ್
ವಿಶ್ವದ ನಂ.5ನೇ ಆಟಗಾರ್ತಿ ಎವ್‌ಜಿನಿ ಬೌಚರ್ಡ್ ಮೊದಲ ಸುತ್ತಿನಲ್ಲಿ ಸೋಲುವ ಚಾಳಿ ಮುಂದುವರಿಸಿದ್ದಾರೆ. ಫೆಬ್ರವರಿಯಲ್ಲಿ ಈ ಚಾಳಿ ಆರಂಭಿಸಿರುವ ಬೌಚರ್ಡ್ ಸತತ 11ನೇ ಬಾರಿ ಮೊದಲ ಸುತ್ತಿನಲ್ಲಿ ಎಡವಿದರು. ಕೇವಲ 74 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಯುಎಸ್ ಓಪನ್ ಚಾಂಪಿಯನ್ ಅನಸ್ಟೇಸಿಜಾ ಸೆವಾಸ್ಟೋವಾ ಕೆನಡಾ ಆಟಗಾರ್ತಿಯನ್ನು 6-3, 6-3 ನೇರ ಸೆಟ್‌ಗಳಿಂದ ಮಣಿಸಿದರು.