×
Ad

ಫೆಡರರ್‌ಗೆ ಸೋತ ಸುಮಿತ್

Update: 2019-08-27 23:45 IST

ನ್ಯೂಯಾರ್ಕ್, ಆ.27: ಭಾರತದ ಉದಯೋನ್ಮುಖ ಟೆನಿಸ್ ತಾರೆ ಸುಮಿತ್ ನಗಾಲ್ ಯುಎಸ್ ಓಪನ್ ಗ್ರಾನ್‌ಸ್ಲಾಮ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಟೆನಿಸ್ ದಿಗ್ಗಜ ರೋಜರ್ ಫೆಡರರ್‌ರನ್ನು ಎದುರಿಸುವ ಅಪೂರ್ವ ಅವಕಾಶ ಪಡೆದರು. ಐದು ಬಾರಿಯ ಚಾಂಪಿಯನ್ ವಿರುದ್ಧ ಮೊದಲ ಸೆಟನ್ನು 6-4 ಅಂತರದಿಂದ ಗೆದ್ದುಕೊಂಡು ಭೀತಿ ಹುಟ್ಟಿಸಿದ್ದ ನಗಾಲ್ ಅಂತಿಮವಾಗಿ 1-6, 2-6, 4-6 ಅಂತರದಿಂದ ಸೋತಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ವಿಶ್ವದ ನಂ.190ನೇ ಆಟಗಾರ ನಗಾಲ್‌ಗೆ ಸೋಲುಣಿಸಿದ ಫೆಡರರ್ ಎರಡನೇ ಸುತ್ತಿಗೆ ತಲುಪಿದರು. ವೃತ್ತಿಜೀವನದ 21ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಫೆಡರರ್ ಮುಂದಿನ ಸುತ್ತಿನಲ್ಲಿ ಬೋಸ್ನಿಯಾದ ಡಮಿರ್ ಝುಮ್‌ಹರ್‌ರನ್ನು ಎದುರಿಸಲಿದ್ದಾರೆ. ಝುಮ್‌ಹರ್ ಫ್ರಾನ್ಸ್‌ನ ಎಲಿಯಟ್ ಬೆನ್‌ಚೆಟ್ರಿಟ್‌ರನ್ನು ಸೋಲಿಸಿದ್ದಾರೆ.

 22ರ ಹರೆಯದ ನಗಾಲ್ ಕಳೆದ ವಾರ ವರ್ಷದ ಕೊನೆಯ ಗ್ರಾನ್‌ಸ್ಲಾಮ್ ಟೂರ್ನಿಗೆ ಅರ್ಹತೆ ಪಡೆದಿದ್ದರು. ಟೆನಿಸ್ ಅಂಗಣವನ್ನು ಪರಿಣಾಮಕಾರಿಕಾರಿಯಾಗಿ ಬಳಸಿಕೊಂಡ ನಗಾಲ್ ಮೊದಲ ಸೆಟನ್ನು ಜಯಿಸಿ ಹೊಸ ಸಂಚಲನ ಮೂಡಿಸಿದರು. 2008ರ ಬಳಿಕ ನ್ಯೂಯಾರ್ಕ್‌ನಲ್ಲಿ ಮೊದಲ ಪ್ರಶಸ್ತಿಯ ಬೇಟೆಯಲ್ಲಿರುವ ಫೆಡರರ್ ಮೊದಲ ಸೆಟ್‌ನಲ್ಲಿ 19 ಅನಗತ್ಯ ತಪ್ಪೆಸಗಿದರು. ಮೊದಲ ಸೆಟ್ ಸೋತ ಬಳಿಕ ಎಚ್ಚೆತ್ತುಕೊಂಡ ಫೆಡರರ್ ಮುಂದಿನ 2 ಸೆಟ್‌ಗಳನ್ನು ಜಯಿಸಿ ಪಂದ್ಯವನ್ನು ತನ್ನದಾಗಿಸಿಕೊಂಡರು.         

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News