ಎನ್‌ಆರ್‌ಸಿ ಪರಿಶೀಲನೆಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಬಾರದು: ಅಮೆರಿಕ ಆಯೋಗ

Update: 2019-08-28 13:54 GMT

ಹೊಸದಿಲ್ಲಿ,ಆ.28: ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಡಿ ನಡೆಸುತ್ತಿರುವ ಪರಿಶೀಲನೆ ಪ್ರಕ್ರಿಯೆಯು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವ ಸಾಧನವಾಗಬಾರದು ಎಂದು ಅಮೆರಿಕ ಮಂಗಳವಾರ ರಚಿಸಿರುವ ದ್ವಿಪಕ್ಷೀಯ ಸ್ವತಂತ್ರ ಪೀಠ ಅಂತರ್‌ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ತಿಳಿಸಿದೆ.

ವಿದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ದ ಉಲ್ಲಂಘನೆಯನ್ನು ಪರಿಶೀಲಿಸುವ ಹೊಣೆಯನ್ನು ನೀಡಲಾಗಿರುವ ಆಯೋಗ ಅಮೆರಿಕ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಕಾಂಗ್ರೆಸ್‌ಗೆ ಸಲಹೆಗಳನ್ನು ನೀಡುತ್ತದೆ. ಅಸ್ಸಾಂನಲ್ಲಿ ಎನ್‌ಆರ್‌ಸಿಯ ದುರ್ಬಳಕೆ ಕುರಿತು ಮತ್ತು ಅದರ ಫಲವಾಗಿ ಧಾರ್ಮಿಕ ಸ್ವಾತಂತ್ರದ ಕುರಿತು ಭಾರತದ ಸಿದ್ಧಾಂತದ ವಿರುದ್ಧವಾಗಿ ನಾಗರಿಕರ ಮೇಲೆ ಧಾರ್ಮಿಕ ನಿರ್ಬಂಧಗಳನ್ನು ಹೇರುವುದರ ಬಗ್ಗೆ ನಾವು ಆತಂಕಿತರಾಗಿದ್ದೇವೆ ಎಂದು ಆಯೋಗದ ಮುಖ್ಯಸ್ಥ ಟೋನಿ ಪರ್ಕಿನ್ಸ್ ತಿಳಿಸಿದ್ದಾರೆ.

ಈ ಹೇಳಿಕೆಯನ್ನು ಆಯೋಗದ ಆಯುಕ್ತೆ ಅರುಣಿಮಾ ಭಾರ್ಗವ ಅವರೂ ಬೆಂಬಲಿಸಿದ್ದಾರೆ. ಎನ್‌ಆರ್‌ಸಿ ಪ್ರಕ್ರಿಯೆ ದೇಶದ ಆಂತರಿಕ ವಿಷಯವಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಕಳೆದ ವಾರ ತಿಳಿಸಿದ್ದರು. ರಾಜ್ಯದಲ್ಲಿ ನೆಲೆಸಿರುವ ಭಾರತದ ನೈಜ ಪ್ರಜೆಗಳನ್ನು ದಾಖಲೆರಹಿತ ವಲಸಿಗರಿಂದ ಪ್ರತ್ಯೇಕಿಸಲು ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಮಾರ್ಚ್ 24. 1971ರ ಮಧ್ಯರಾತ್ರಿಗೂ ಮೊದಲು ತಾನು ಅಥವಾ ತನ್ನ ಪೂರ್ವಜರು ಅಸ್ಸಾಂ ಪ್ರವೇಶಿಸಿದ್ದರು ಎಂದು ಸಾಬೀತುಪಡಿಸಲಾಗದವರನ್ನು ವಿದೇಶಿಗರು ಎಂದು ಘೋಷಿಸಲಾಗುತ್ತದೆ.

ಈ ಪ್ರಕ್ರಿಯೆಯು ನಿರ್ದಿಷ್ಟ ಸಮುದಾಯದ ಜೊತೆ ಪಕ್ಷಪಾತ ಮಾಡುತ್ತಿದೆ ಎಂಬ ಆರೋಪವೂ ಸೇರಿದಂತೆ ಆರಂಭದಿಂದಲೂ ಎನ್‌ಆರ್‌ಸಿ ಪ್ರಕ್ರಿಯೆ ಅನೇಕ ವಿವಾದಗಳಿಗೆ ತುತ್ತಾಗುತ್ತಲೇ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News