ಬಿಜೆಪಿ ಮುಖಂಡನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ವಿದ್ಯಾರ್ಥಿನಿ ಇನ್ನೂ ನಾಪತ್ತೆ

Update: 2019-08-28 14:07 GMT

ಹೊಸದಿಲ್ಲಿ, ಆ.28: ಬಿಜೆಪಿ ಮುಖಂಡ, ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದ ಕಾನೂನು ವಿದ್ಯಾರ್ಥಿನಿ ಕಳೆದ 3 ದಿನದಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಆಕೆಯ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿದ್ಯಾರ್ಥಿನಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ಪತ್ತೆ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದ ಮಾಧ್ಯಮ ವರದಿಯನ್ನು ಗಮನಿಸುವಂತೆ ಕೋರಿ ಸುಪ್ರೀಂಕೋರ್ಟ್‌ನ ವಕೀಲರ ತಂಡವೊಂದು ಮುಖ್ಯ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿದ್ದಾರೆ.

ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ಎದುರಾದ ಪರಿಸ್ಥಿತಿ ಈ ಪ್ರಕರಣದಲ್ಲೂ ಪುನರಾವರ್ತನೆಯಾಗುವ ಸಾಧ್ಯತೆಯಿದೆ ಎಂದು ವಕೀಲರು ಕಳವಳ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡ ಚಿನ್ಮಯಾನಂದ ಮುಮುಕ್ಷು ಎಂಬ ಹೆಸರಿನ ಆಶ್ರಮವನ್ನು ನಡೆಸುತ್ತಿದ್ದು ಈ ಆಶ್ರಮದ ಆಶ್ರಯದಲ್ಲಿ ಕಾರ್ಯಾಚರಿಸುವ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದ ತನ್ನ ಮಗಳ ಮೇಲೆ ಚಿನ್ಮಯಾನಂದ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ವಿದ್ಯಾರ್ಥಿನಿಯ ತಂದೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಚಿನ್ಮಯಾನಂದ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

 3 ದಿನದ ಹಿಂದೆ ಆನ್‌ಲೈನ್‌ನಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದ ವಿದ್ಯಾರ್ಥಿನಿ, ತನಗೆ ಸಂತ ಸಮುದಾಯದ ಮುಖಂಡನೊಬ್ಬನಿಂದ ಜೀವಬೆದರಿಕೆ ಇದೆ ಎಂದು ಹೇಳಿಕೆ ನೀಡಿದ್ದಳು. ಬಳಿಕ ಆಕೆ ನಾಪತ್ತೆಯಾಗಿದ್ದು ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ.

ತನ್ನ ವಿರುದ್ಧ ನಡೆಸಿರುವ ಷಡ್ಯಂತ್ರ ಇದಾಗಿದ್ದು, ಆರೋಪ ಹೊರಿಸಿರುವ ವಿದ್ಯಾರ್ಥಿನಿಯೂ ಇದರಲ್ಲಿ ಶಾಮೀಲಾಗಿದ್ದಾಳೆ. ಇದಕ್ಕೂ ಮೊದಲು ತನ್ನನ್ನು ಬ್ಲಾಕ್‌ಮೇಲ್ ಮಾಡಿ ಹಣ ಕೀಳಲು ನಾಲ್ಕು ಹುಡುಗರು ಪ್ರಯತ್ನಿಸಿ ವಿಫಲರಾಗಿದ್ದರು ಎಂದು ಚಿನ್ಮಯಾನಂದ ಪ್ರತಿಕ್ರಿಯಿಸಿದ್ದಾರೆ.

ಆವತ್ತು ಕುಲ್‌ದೀಪ್ ಸಿಂಗ್ ಸೆಂಗಾರ್ ವಿರುದ್ಧ ಷಡ್ಯಂತ್ರ ನಡೆದಿದ್ದು ಈಗ ತನ್ನನ್ನು ಗುರಿಯಾಗಿಸಿಕೊಳ್ಳಲಾಗಿದೆ. ಆದಿತ್ಯನಾಥ್ ಸರಕಾರದ ಜನಪ್ರಿಯತೆ ಸಹಿಸದೆ ಸರಕಾರಕ್ಕೆ ಕೆಟ್ಟ ಹೆಸರು ತರುವ ಪಿತೂರಿಯೂ ಇದರಲ್ಲಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News