ಸರ್ದಾರ್ ಸರೋವರ ಜಲಾಶಯದ ಎತ್ತರ ಏರಿಕೆಯ ವಿರುದ್ಧ ಮೇಧಾ ಪಾಟ್ಕರ್ ಅನಿರ್ದಿಷ್ಟಾವಧಿ ನಿರಶನ ಐದನೇ ದಿನಕ್ಕೆ

Update: 2019-08-30 14:54 GMT

ಛೋಟಾ ಬಡದಾ(ಬಡವಾನಿ),ಆ.30: ನರ್ಮದಾ ನದಿಗೆ ನಿರ್ಮಿಸಲಾಗಿರುವ ಸರ್ದಾರ್ ಸರೋವರ ಜಲಾಶಯದ ಎತ್ತರವನ್ನು ಹೆಚ್ಚಿಸುವುದನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ‘ನರ್ಮದಾ ಚುನೌತಿ(ಸವಾಲು) ಸತ್ಯಾಗ್ರಹ ’ದ ಅಂಗವಾಗಿ ಮಧ್ಯಪ್ರದೇಶದ ಬಡವಾನಿ ಜಿಲ್ಲೆಯ ಛೋಟಾ ಬಡದಾದಲ್ಲಿ ಆ.25ರಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ನಿರಶನವು ಶುಕ್ರವಾರ ಐದನೇ ದಿನಕ್ಕೆ ಕಾಲಿರಿಸಿದೆ.

ನಿರಶನವನ್ನು ಅಂತ್ಯಗೊಳಿಸುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಮಾಡಿಕೊಂಡಿದ್ದ ಮನವಿಯನ್ನು ಮುಳುಗಡೆಯ ಭೀತಿಯಲ್ಲಿರುವ ಜನರಿಗೆ ಪುನರ್ವಸತಿ ಕಲ್ಪಿಸುವ ಯಾವುದೇ ದೃಢವಾದ ಯೋಜನೆಯ ಅನುಪಸ್ಥಿತಿಯಲ್ಲಿ ಪಾಟ್ಕರ್ ತಿರಸ್ಕರಿಸಿದ್ದಾರೆ. ಶುಕ್ರವಾರ ವಿವಿಧ ಪೀಡಿತ ಗ್ರಾಮಗಳಿಗೆ ಸೇರಿದ 10 ಜನರು ಸಹ ಅನಿರ್ದಿಷ್ಟಾವಧಿ ನಿರಶನವನ್ನು ಆರಂಭಿಸುವುದರೊಂದಿಗೆ ಸತ್ಯಾಗ್ರಹವು ಇನ್ನಷ್ಟು ತೀವ್ರಗೊಂಡಿದೆ.

 ಕೇಂದ್ರ ಮತ್ತು ಗುಜರಾತ ಸರಕಾರಗಳ ಸಂವೇದನಾಹೀನತೆಯಿಂದಾಗಿ ಸೂಕ್ತ ಪುನರ್ವಸತಿ ನೀತಿಯ ಅನುಪಸ್ಥಿತಿಯಲ್ಲಿ ಮಧ್ಯಪ್ರದೇಶ,ಮಹಾರಾಷ್ಟ್ರ ಮತ್ತು ಗುಜರಾತಗಳ ಸಾವಿರಾರು ಕುಟುಂಬಗಳು ಮುಳುಗಡೆಯ ಸಂಕಷ್ಟವನ್ನು ಎದುರಿಸುತ್ತಿವೆ. ಸೂಕ್ತ ಪುನರ್ವಸತಿಯನ್ನು ಕಲ್ಪಿಸದೆ ಜಲಾಶಯದ ನೀರಿನ ಮಟ್ಟವನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರಕಾರದ ಅಧೀನದ ನರ್ಮದಾ ನಿಯಂತ್ರಣ ಪ್ರಾಧಿಕಾರ(ಎನ್‌ಸಿಎ)ವು ಈ ಕುಟುಂಬಗಳನ್ನು ನೀರಿನಲ್ಲಿ ಮುಳುಗಡೆಗೊಳಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದೆ ಎಂದು ಪಾಟ್ಕರ್ ನೇತೃತ್ವದ ನರ್ಮದಾ ಬಚಾವೊ ಆಂದೋಲನವು ಆರೋಪಿಸಿದೆ.

ಸದ್ಯ ಮಧ್ಯಪ್ರದೇಶವೊಂದರಲ್ಲಿಯೇ 32,000 ಪೀಡಿತ ಜನರ ಪುನರ್ವಸತಿ ಕಾರ್ಯ ಬಾಕಿಯುಳಿದಿದೆ. ಮಹಾರಾಷ್ಟ್ರ ಮತ್ತು ಗುಜರಾತಗಳ ನೂರಾರು ಕುಟುಂಬಗಳೂ ಪುನರ್ವಸತಿಗಾಗಿ ಕಾಯುತ್ತಿವೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News