ಪೌರತ್ವ ನೋಂದಣಿ ಪಟ್ಟಿಯಲ್ಲಿ ಇಲ್ಲದಿದ್ದರೆ ‘ವಿದೇಶಿ’ ಎಂದರ್ಥವಲ್ಲ: ಅಸ್ಸಾಂ ಸಿಎಂ

Update: 2019-08-30 15:42 GMT

ಗುವಾಹತಿ, ಆ. 30: ಪೌರತ್ವ ಸಾಬಿತುಪಡಿಸಲು ಪ್ರಾಮಾಣಿಕ ಭಾರತೀಯನಿಗೆ ನೆರವು ನೀಡಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ರಾಜ್ಯ ಸರಕಾರ ತೆಗೆದುಕೊಳ್ಳಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಶುಕ್ರವಾರ ಹೇಳಿದ್ದಾರೆ.

ಯಾವುದೇ ವ್ಯಕ್ತಿಯ ಹೆಸರು ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿಯಲ್ಲಿ ಇಲ್ಲ ಎಂದರೆ, ಆತ-ಆಕೆ ವಿದೇಶಿ ಎಂದು ಅರ್ಥವಲ್ಲ. ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿದ ಬಳಿಕ ವಿದೇಶಿಗರ ನ್ಯಾಯಾಧಿಕರಣ ಮಾತ್ರ ಈ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

ಯಾರೊಬ್ಬರೂ ಆಂತಕಪಟ್ಟುಕೊಳ್ಳಬೇಕಾಗಿಲ್ಲ. ಸರಕಾರ ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸಲಿದೆ. ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿಯಲ್ಲಿ ಹೆಸರು ಇಲ್ಲದವರು ತಮ್ಮ ಪೌರತ್ವ ಸಾಬೀತುಪಡಿಸಲು ಇನ್ನಷ್ಟು ಅವಕಾಶಗಳನ್ನು ಪಡೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿದೇಶಿಗರ ನ್ಯಾಯಾಧಿಕರಣ ಅಥವಾ ಉನ್ನತ ನ್ಯಾಯಾಲಯಗಳಲ್ಲಿ ಪ್ರಕರಣವನ್ನು ಮುಂದುವರಿಸಲು ಬಡ ಜನರಿಗೆ ರಾಜ್ಯ ಸರಕಾರ ಕಾನೂನು ನೆರವು ನೀಡಲಿದೆ. ಅಲ್ಲದೆ, ಸರಕಾರ ಈಗಾಗಾಲೇ ನ್ಯಾಯಾಧಿಕರಣದಲ್ಲಿ ಮನವಿ ಸಲ್ಲಿಸುವ ಅವಧಿಯನ್ನು 60 ದಿನಗಳಿಂದ 120 ದಿನಗಳಿಗೆ ವಿಸ್ತರಿಸಿದೆ ಎಂದು ಸೋನಾವಾಲ್ ಹೇಳಿದರು.

2018ರಲ್ಲಿ ಪ್ರಕಟಿಸಿದ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಕರಡು ಪಟ್ಟಿಯಲ್ಲಿ 40 ಲಕ್ಷಕ್ಕೂ ಅಧಿಕ ಜನರ ಹೊರಗುಳಿದಿದ್ದಾರೆ. ಹೆಚ್ಚುವರಿ ಪಟ್ಟಿಯನ್ನು ಜೂನ್ 26ರಂದು ಪ್ರಕಟಿಸಲಾಗಿತ್ತು. ಇದು ಮೊದಲಿನ ಕರಡಿನಲ್ಲಿ ಒಳಗೊಂಡ 1,02,463 ಜನರ ಹೆಸರನ್ನು ಒಳಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News