ಕೆಲಸಕ್ಕೆ ಮರಳುವ ಇರಾದೆಯಿಲ್ಲ: ಕಾಶ್ಮೀರದ ನಿರ್ಬಂಧ ವಿರೋಧಿಸಿ ಹುದ್ದೆ ತೊರೆದ ಐಎಎಸ್ ಅಧಿಕಾರಿ

Update: 2019-08-30 16:30 GMT
ಫೋಟೊ ಕೃಪೆ: The Wire

ಹೊಸದಿಲ್ಲಿ, ಆ.30: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಹೇರಿರುವ ನಿರ್ಬಂಧವನ್ನು ವಿರೋಧಿಸಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ತನ್ನ ನಿರ್ಧಾರಕ್ಕೆ ಅಂಟಿಕೊಂಡಿದ್ದು, ಸೇವೆಗೆ ಮರಳುವ ಯಾವ ಉದ್ದೇಶವೂ ಇಲ್ಲ ಎಂದು ತಿಳಿಸಿದ್ದಾರೆ.

ಕರ್ತವ್ಯಕ್ಕೆ ಮರಳುವಂತೆ ಆಗಸ್ಟ್ 27ರಂದು ಸಿಬ್ಬಂದಿ ಇಲಾಖೆಯಿಂದ ಪಡೆದ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿದ ಗೋಪಿನಾಥನ್ ಈ ಹೇಳಿಕೆ ನೀಡಿದ್ದಾರೆ. ಈ ಕುರಿತು ಆಂಗ್ಲ ಸುದ್ದಿ ಜಾಲತಾಣದ ಜೊತೆ ಮಾತನಾಡಿದ ಗೋಪಿನಾಥನ್, ಹುದ್ದೆಗೆ ಮರಳುವ ಯಾವುದೇ ಇರಾದೆಯಿಲ್ಲ ಮತ್ತು ತಾನು ನಿಯೋಜನೆಗೊಂಡಿರುವ ದಾದರ್ ಮತ್ತು ನಗರ್ ಹವೇಲಿ ಹಾಗೂ ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದಿಂದ ಬೇರೆಡೆಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.

 ಕೇಂದ್ರಾಡಳಿತ ಪ್ರದೇಶದಲ್ಲಿ ಅವರು ವಿದ್ಯುತ್, ನಗರಾಭಿವೃದ್ಧಿ ಮತ್ತು ಕೃಷಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವರದಿಗಳ ಪ್ರಕಾರ, ಕಣ್ಣನ್ ಅವರು ತನ್ನ ಮನೆಯಲ್ಲಿರದ ಕಾರಣ ಸಿಬ್ಬಂದಿ ಇಲಾಖೆಯ ನೋಟಸನ್ನು ಅವರ ನಿವಾಸದ ಬಾಗಿಲಿಗೆ ಹಚ್ಚಲಾಗಿತ್ತು. ತನ್ನ ರಾಜೀನಾಮೆಯನ್ನು ಸರಕಾರ ಸ್ವೀಕರಿಸಿಯೂ ಇಲ್ಲ, ನಿರಾಕರಿಸಿಯೂ ಇಲ್ಲ. ಸದ್ಯ ನೋಟಿಸ್ ಜಾರಿ ಮಾಡಿರುವುದು ಒಂದು ಪ್ರಕ್ರಿಯೆಯಷ್ಟೇ ಎಂದು ಗೋಪಿನಾಥನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News