×
Ad

ನಡಾಲ್, ಒಸಾಕಾ ಪ್ರಿ-ಕ್ವಾರ್ಟರ್ ಫೈನಲ್ ಗೆ

Update: 2019-09-01 23:03 IST

ನ್ಯೂಯಾರ್ಕ್, ಸೆ.1: ಸ್ಪೇನ್ ಸೂಪರ್‌ಸ್ಟಾರ್ ಆಟಗಾರ ರಫೆಲ್ ನಡಾಲ್ ಹಾಗೂ ಹಾಲಿ ಮಹಿಳಾ ಚಾಂಪಿಯನ್ ನವೊಮಿ ಒಸಾಕಾ ಅಮೆರಿಕ ಓಪನ್ ಟೆನಿಸ್ ಟೂರ್ನಮೆಂಟ್‌ನ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್‌ನಮೂರನೇ ಸುತ್ತಿನ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ನಡಾಲ್ ದಕ್ಷಿಣ ಕೊರಿಯಾದ ಚುಂಗ್ ಹಿಯೊನ್‌ರನ್ನು 6-3, 6-4, 6-2 ನೇರ ಸೆಟ್‌ಗಳಿಂದ ಮಣಿಸಿದರು. ಈ ಮೂಲಕ ನಾಲ್ಕನೇ ಸುತ್ತಿಗೆ ಪ್ರವೇಶಿಸಿದರು.

ನಡಾಲ್ ಸೋಮವಾರ ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ 2014ರ ಚಾಂಪಿಯನ್ ಮರಿನ್ ಸಿಲಿಕ್‌ರನ್ನು ಎದುರಿಸಲಿದ್ದಾರೆ. ಸಿಲಿಕ್ ಅವರು ಇಸ್ನೇರ್‌ರನ್ನು 7-5, 3-6, 7-6(6), 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

 ಮೊದಲ ಬಾರಿ ಅಂತಿಮ-16ರ ಸುತ್ತಿಗೆ ತಲುಪಿದ ಝ್ವೆರೆವ್: ಇದೇ ವೇಳೆ, ಮತ್ತೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಅಲೆಕ್ಸಾಂಡರ್ ಝ್ವೆರೆವ್ ಸ್ಲೋವಾನಿಯದ ಅಲ್‌ಜಾಝ್ ಬೆಡೆನೆ ಅವರನ್ನು 6-7(4/7), 7-6(7/4), 6-3, 7-6(7/3) ಸೆಟ್‌ಗಳಿಂದ ಮಣಿಸಿದರು. ಇದರೊಂದಿಗೆ ಮೊದಲ ಬಾರಿ ಅಂತಿಮ-16ರ ಸುತ್ತು ತಲುಪಿದರು.

 ಮೊದಲೆರಡು ಸುತ್ತಿನ ಪಂದ್ಯಗಳಲ್ಲಿ ಐದು ಸೆಟ್‌ಗಳ ಅಂತರದಿಂದ ಜಯ ಸಾಧಿಸಿರುವ ಆರನೇ ಶ್ರೇಯಾಂಕದ ಝ್ವೆರೆವ್ ಕ್ವಾರ್ಟರ್ ಫೈನಲ್‌ನಲ್ಲಿ ಮೂರು ಬಾರಿಯ ಚಾಂಪಿಯನ್ ರಫೆಲ್ ನಡಾಲ್‌ರನ್ನು ಎದುರಿಸುವ ಸಾಧ್ಯತೆಯಿದೆ. ಕಿರ್ಗಿಯೊಸ್‌ಗೆ ಸೋಲು: ಆಸ್ಟ್ರೇಲಿಯದ ನಿಕ್ ಕಿರ್ಗಿ ಯೊಸ್ ಅವರ ಯುಎಸ್ ಓಪನ್ ಅಭಿಯಾನ ಮೂರನೇ ಸುತ್ತಿನಲ್ಲಿ ಕೊನೆಗೊಂಡಿದೆ.

 ರಶ್ಯದ ಆ್ಯಂಡ್ರೆ ರುಬ್ಲೆವ್ ಮೂರನೇ ಸುತ್ತಿನ ಪಂದ್ಯದಲ್ಲ್ಲಿ ಕಿರ್ಗಿಯೊಸ್ ವಿರುದ್ಧ 7-6(5), 7-6(5), 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿ ಅಂತಿಮ-16ರ ಸುತ್ತು ತಲುಪಿದರು.

ರುಬ್ಲೆವ್ ಮುಂದಿನ ಸುತ್ತಿನಲ್ಲಿ ಇಟಲಿಯ ಮಟ್ಟೆವೊ ಬೆರ್ರೆಟ್ಟಿನಿ ಅವರನ್ನು ಮುಖಾಮುಖಿಯಾಗಲಿದ್ದಾರೆ.

 15ರ ಬಾಲಕಿಯ ವಿರುದ್ಧ ಒಸಾಕಾಗೆ ಜಯ

 ಅಗ್ರ ರ್ಯಾಂಕಿನ ಆಟಗಾರ್ತಿ ನವೊಮಿ ಒಸಾಕಾ ಅಮೆರಿಕ ಓಪನ್‌ನ ಮಹಿಳೆಯರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ 15ರ ಹರೆಯದ ಬಾಲಕಿ ಕೊಕೊ ಗೌಫ್‌ರನ್ನು 6-3, 6-0 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ 21ರ ಹರೆಯದ ಒಸಾಕಾ ಅಮೆರಿಕದ ಕಿರಿಯ ಆಟಗಾರ್ತಿಯ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದು ಟೂರ್ನಿಯ ನಾಲ್ಕನೇ ಸುತ್ತಿಗೆ ತೇರ್ಗಡೆಯಾದರು. ಒಸಾಕಾ ಮುಂದಿನ ಸುತ್ತಿನಲ್ಲಿ ಸ್ವಿಸ್‌ನ 13ನೇ ಶ್ರೇಯಾಂಕದ ಬೆಲಿಂಡ ಬೆನ್‌ಸಿಕ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News