ಕಾಮನ್‌ವೆಲ್ತ್ ಗೇಮ್ಸ್ ಬಹಿಷ್ಕರ ವಿಚಾರ ಸರಕಾರದ ತೀರ್ಮಾನವೇ ಅಂತಿಮ: ಕಿರಣ್ ರಿಜಿಜು

Update: 2019-09-01 17:38 GMT

 ಹೊಸದಿಲ್ಲಿ, ಸೆ.1: ಬರ್ಮಿಂಗ್‌ಹ್ಯಾಮ್‌ನಲ್ಲಿ 2022ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ (ಸಿಬಿಡಬ್ಲುಜಿ)ನಿಂದ ಶೂಟಿಂಗ್ ಕ್ರೀಡೆಯನ್ನು ಹೊರಗಿಟ್ಟಿರುವುದನ್ನು ಖಂಡಿಸಿ ಗೇಮ್ಸ್‌ನ್ನು ಬಹಿಷ್ಕರಿಸುವ ಕುರಿತು ಸರಕಾರವೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದಾರೆ.

 ‘‘ನಾವು ತೆಗೆದುಕೊಳ್ಳುವ ನಿರ್ಧಾರ ಗೇಮ್ಸ್‌ಗೆ ತಯಾರಿ ನಡೆಸುತ್ತಿರುವ ನಮ್ಮ ಅಥ್ಲೀಟ್‌ಗಳ ಪದಕಗಳ ಗುರಿಗೆ ಧಕ್ಕೆಯಾಗಬಾರದು. ನಮ್ಮ ಬಹಿಷ್ಕಾರದ ಕರೆಯಿಂದ ಅಥ್ಲೀಟ್‌ಗಳು ಬಲಿಪಶುವಾಗಬಾರದು. ಗೇಮ್ಸ್‌ನ್ನು ಬಹಿಷ್ಕರಿಸಬೇಕೇ, ಬೇಡವೇ ಎಂಬ ಕುರಿತು ಸರಕಾರ ಸರಿಯಾದ ಸಮಯಕ್ಕೆ ನಿರ್ಧಾರ ಕೈಗೊಳ್ಳಲಿದೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಈ ಬಗ್ಗೆ ತನ್ನದೇ ನಿರ್ಧಾರ ಕೈಗೊಳ್ಳುವಂತಿಲ್ಲ’’ ಎಂದು ರಿಜಿಜು ಹೇಳಿದ್ದಾರೆ.

‘‘ಸರಕಾರ ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಮೊದಲು ಐಒಎ, ಕಾಮನ್‌ವೆಲ್ತ್ ಗೇಮ್ಸ್ ಒಕ್ಕೂಟದ ಅಧ್ಯಕ್ಷ ಲೂಯಿಸ್ ಮಾರ್ಟಿರನ್ನು ಭೇಟಿಯಾಗಬೇಕು. ಈ ನಿರ್ಧಾರ ದೇಶದ ಹಿತಾಸಕ್ತಿಗೆ ಮಾರಕವಾಗಿರಬಾರದೆಂದು ಅವರಿಗೆ ನಮ್ಮ ನಿಲುವನ್ನು ತಿಳಿಸಬೇಕು ಎಂದು ನಾನು ಹೇಳಿದ್ದೇನೆ. ಗೇಮ್ಸ್ ಆಯೋಜನಾ ಸಮಿತಿ ನಿರ್ಧಾರ ತೆಗೆದುಕೊಂಡ ಬಳಿಕ ಸರಕಾರ ನಿರ್ಧಾರ ಕೈಗೊಳ್ಳಲಿದೆ. ಆದರೆ, ಈ ಹಂತದಲ್ಲಿ ಗೇಮ್ಸ್‌ನ್ನು ಬಹಿಷ್ಕರಿಸುವುದು ಒಂದು ಆಯ್ಕೆಯಲ್ಲ’’ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News