ಹ್ಯಾಟ್ರಿಕ್ ಹೀರೋ ಬುಮ್ರಾ ಕೊಹ್ಲಿಗೆ ಋಣಿಯಾಗಿರಬೇಕು: ಹರ್ಭಜನ್
ಹೊಸದಿಲ್ಲಿ, ಸೆ.1: ನನಗೆ 18 ವರ್ಷಗಳ ಹಿಂದೆ ಹ್ಯಾಟ್ರಿಕ್ ಟೆಸ್ಟ್ ವಿಕೆಟ್ ಸಾಧನೆಗೆ ನೆರವಾಗಿದ್ದ ಸಡಗೋಪನ್ ರಮೇಶ್‌ಗೆ ನಾನು ಋಣಿಯಾಗಿರುವೆ. ನನ್ನಂತೆಯೇ ಹ್ಯಾಟ್ರಿಕ್ ಟೆಸ್ಟ್ ವಿಕೆಟ್ ಪಡೆದು ಅಪೂರ್ವ ಸಾಧನೆ ಮಾಡಿರುವ ಜಸ್‌ಪ್ರೀತ್ ಬುಮ್ರಾ ಕೂಡ ನಾಯಕ ವಿರಾಟ್ ಕೊಹ್ಲಿಗೆ ಸದಾ ಋಣಿಯಾಗಿರಬೇಕು ಎಂದು ಖ್ಯಾತ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಸಲಹೆ ನೀಡಿದ್ದಾರೆ.
ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊತ್ತ ಮೊದಲ ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಶ್ರೇಯಕ್ಕೆ ಪಾತ್ರರಾಗಿರುವ ಹರ್ಭಜನ್ ಸಿಂಗ್, ಬುಮ್ರಾ ಅವರ ಸಾಧನೆಯನ್ನು ಶ್ಲಾಘಿಸಿದರು. ಬುಮ್ರಾ ಅವರು ಹರ್ಭಜನ್, ಇರ್ಫಾನ್ ಪಠಾಣ್ ಬಳಿಕ ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೂರನೇ ಬೌಲರ್. 2001ರಲ್ಲಿ ಕೋಲ್ಕತಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ರಿಕಿ ಪಾಂಟಿಂಗ್, ಆ್ಯಡಮ್ ಗಿಲ್‌ಕ್ರಿಸ್ಟ್ ಹಾಗೂ ಶೇನ್ ವಾರ್ನ್‌ರಂತಹ ಘಟಾನುಘಟಿ ಆಟಗಾರರನ್ನು ಸತತ 3 ಎಸೆತಗಳಲ್ಲಿ ಹರ್ಭಜನ್ ಔಟ್ ಮಾಡಿದ್ದರು. ‘‘ಹ್ಯಾಟ್ರಿಕ್ ವಿಕೆಟ್ ಸಾಧನೆಯ ಶ್ರೇಯಸ್ಸು ಬುಮ್ರಾಗೆ ಎಷ್ಟು ಸಲ್ಲುತ್ತದೋ, ಕೊಹ್ಲಿಗೂ ಅಷ್ಟೇ ಸಲ್ಲುತ್ತದೆ. ವಿರಾಟ್ ಕೊಹ್ಲಿ ಅಂಪೈರ್ ತೀರ್ಪು ಪರಾಮರ್ಶೆಗೆ ಮೊರೆ ಹೋಗುವ ದಿಟ್ಟ ನಿರ್ಧಾರ ಕೈಗೊಳ್ಳದೇ ಇರುತ್ತಿದ್ದರೆ ಬುಮ್ರಾಗೆ ಹ್ಯಾಟ್ರಿಕ್ ವಿಕೆಟ್ ಲಭಿಸುತ್ತಿರಲಿಲ್ಲ. 2001ರಲ್ಲಿ ರಮೇಶ್ ಅವರ ಫೀಲ್ಡಿಂಗ್ ಪ್ರಯತ್ನ ಇರದೇ ಇರುತ್ತಿದ್ದರೆ ನಾನು ಇತಿಹಾಸ ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ನಾನು ದಾದಾ(ಗಂಗುಲಿ)ಅವರೊಂದಿಗೆ ಚರ್ಚಿಸುವಾಗ ಇದನ್ನು ನೆನಪಿಸುತ್ತಿರುತ್ತೇನೆ’’ ಎಂದು ಟರ್ಬನೇಟರ್ ಖ್ಯಾತಿಯ ಹರ್ಭಜನ್ ಹೇಳಿದ್ದಾರೆ.