ಹಿಂದೂಗಳ ಭಾವನೆಗಳಿಗೆ ಧಕ್ಕೆ ಆರೋಪ: ‘ನೆಟ್‌ಫ್ಲಿಕ್ಸ್’ ವಿರುದ್ಧ ದೂರು

Update: 2019-09-04 15:57 GMT

ಹೊಸದಿಲ್ಲಿ, ಸೆ. 4: ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳಲ್ಲಿ ಭಾರತವನ್ನು ‘ತಪ್ಪಾಗಿ ಚಿತ್ರಣ’ ಮಾಡಲಾಗಿದೆ ಹಾಗೂ ‘ದೇಶದ ಗೌರವಕ್ಕೆ ಹಾನಿ’ ಉಂಟು ಮಾಡಲಾಗಿದೆ ಎಂದು ಆರೋಪಿಸಿ ಶಿವಸೇನೆಯ ಐಟಿ ಸೆಲ್‌ನ ಸದಸ್ಯರೊಬ್ಬರು ನೆಟ್‌ಫ್ಲಿಕ್ಸ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ‘ಸೇಕ್ರೆಡ್ ಗೇಮ್’, ‘ಲೈಲಾ’, ಘೌಲ್, ಹಸನ್ ಮಿನ್ಹಾಜ್ ನಡೆಸಿ ಕೊಡುವ ಕಾಮಿಡಿ ಶೋ ‘ಪ್ಯಾಟ್ರಿಯೋಟ್’ ಕಾರ್ಯಕ್ರಮಗಳು ಜಾಗತಿಕ ಮಟ್ಟದಲ್ಲಿ ದೇಶದ ಗೌರವಕ್ಕೆ ಹಾನಿ ಉಂಟು ಮಾಡುತ್ತಿವೆ ಎಂದು ಆರೋಪಿಸಿ ಶಿವಸೇನೆ ಸದಸ್ಯ ರಮೇಶ್ ಸೋಲಂಕಿ ಮುಂಬೈಯ ಎಲ್.ಟಿ. ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಆನ್‌ಲೈನ್ ಪ್ರಸಾರ ಸೇವೆ ದೇಶವನ್ನು ತಪ್ಪಾಗಿ ಚಿತ್ರಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಹಿನ್ನೆಲೆಯಲ್ಲಿ ನೆಟ್‌ಫ್ಲಿಕ್ಸ್ ವಿರುದ್ಧ ಅಗತ್ಯದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಪೊಲೀಸರನ್ನು ಆಗ್ರಹಿಸಿದ್ದಾರೆ.

ಸೋಲಂಕಿ ಅವರ ದೂರಿನ ಪ್ರತಿಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಹಾಗೂ ಮುಂಬೈ ಪೊಲೀಸ್ ಆಯುಕ್ತರಿಗೆ ಕಳುಹಿಸಿ ಕೊಡಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಆ ಆರೋಪಗಳನ್ನು ನೆಟ್‌ಫ್ಲಿಕ್ಸ್‌ನ ಲೈಲಾ ಸರಣಿಯ ಪ್ಯಾಟ್ರಿಕ್ ಗ್ರಹಾಂ, ತಳ್ಳಿ ಹಾಕಿದ್ದಾರೆ. ಅಲ್ಲದೆ, ಈ ಚಿತ್ರಣಗಳು ಸಂಪೂರ್ಣ ಕಾಲ್ಪನಿಕ. ನಿರ್ಮಾಣಕಾರರಿಗೆ ಯಾರೊಬ್ಬರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಉದ್ದೇಶ ಇಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News