​ಮೋಸದ ಚುನಾವಣೆ ಪ್ರಕರಣ : ಬಿಜೆಪಿ ಮಾಜಿ ಸಿಎಂಗೆ ಕಂಟಕ

Update: 2019-09-08 04:00 GMT

ರಾಯಪುರ: ಅಂಗತಢದಲ್ಲಿ ನಡೆದ 2014ರ ಉಪಚುನಾವಣೆ ವೇಳೆ ಮ್ಯಾಚ್‌ಫಿಕ್ಸಿಂಗ್ ಮಾದರಿಯಲ್ಲಿ ಪೋಲ್‌ಫಿಕ್ಸಿಂಗ್ ಮಾಡಿಕೊಂಡ ಪ್ರಕರಣ ಇದೀಗ ಮಹತ್ವದ ತಿರುವು ಪಡೆದಿದೆ.

ಮಾಜಿ ಮುಖ್ಯಮಂತ್ರಿ ಬಿಜೆಪಿಯ ರಮಣ್ ಸಿಂಗ್ ಅವರು ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಸ್ಪರ್ಧಾ ಕಣ ಪ್ರವೇಶಿಸದಂತೆ ಮಾಡಲು ಏಳು ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದ್ದರು ಎಂದು ಮಾಜಿ ಶಾಸಕ ಮಂತೂರಾಮ್ ಪವಾರ್ ಅವರು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿದ್ದಾರೆ.

ಪ್ರಥಮ ದರ್ಜೆ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ನೀರಜ್ ಶ್ರೀವಾಸ್ತವ ಅವರ ಮುಂದೆ ಅಪರಾಧ ದಂಡ ಸಂಹಿತೆಯ ಸೆಕ್ಷನ್ 164ರ ಅನ್ವಯ ಹೇಳಿಕೆ ದಾಖಲಿಸಿದ ಅವರು, "ಅಂದಿನ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ರಾಜೇಶ್ ಮುನಾಟ್ ಬಂಗ್ಲೆಯಲ್ಲಿ ಈ ವ್ಯವಹಾರ ಕುದುರಿಸಲಾಗಿತ್ತು" ಎಂದು ಆಪಾದಿಸಿದರು.

"ಮುನಾಟ್ ನನ್ನ ಮುಂದೆಯೇ ಏಳು ಕೋಟಿ ರೂಪಾಯಿಗಳನ್ನು ರಾಜಕೀಯ ಸಂಪರ್ಕ ಇರುವ ಅಮೀನ್ ಮೆನನ್ ಮತ್ತು ಫಿರೋಝ್ ಸಿದ್ದಿಕಿ ಎಂಬುವವರಿಗೆ ನೀಡಿದ್ದಾರೆ. ಆದರೆ ನಾನು ಒಂದು ಪೈಸೆಯನ್ನೂ ಪಡೆದಿಲ್ಲ. ಈ ಮೋಸ ಒಪ್ಪಂದದ ಬಳಿಕ ನನಗೆ ಕೀಳರಿಮೆ ಉಂಟಾಯಿತು" ಎಂದು ಹೇಳಿದ್ದಾರೆ. ಅಂದು ಶಾಸಕರಾಗಿದ್ದ ಅಜಿತ್ ಜೋಗಿ ಪುತ್ರ ಅಮಿತ್ ಕೂಡಾ ಈ ಮೋಸದ ಒಪ್ಪಂದದಲ್ಲಿ ಷಾಮೀಲಾಗಿದ್ದಾರೆ ಎಂದು ವಿವರಿಸಿದ್ದಾರೆ.

ಈ ಆರೋಪವನ್ನು ರಮಣ್ ಸಿಂಗ್ ನಿರಾಕರಿಸಿದ್ದಾರೆ. ಪವಾರ್ ಒತ್ತಡಕ್ಕೆ ಮಣಿದು ಈ ಹೇಳಿಕೆ ನೀಡಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

2014ರ ಅಂತಗಢ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಪವಾರ್ ಕೊನೆಕ್ಷಣದಲ್ಲಿ ಕಣದಿಂದ ಹಿಂದೆ ಸರಿದು ಅಚ್ಚರಿಗೆ ಕಾರಣರಾಗಿದ್ದರು. ಬಳಿಕ ಪವಾರ್ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News