ಸರ್ಕಾರ, ಸೇನೆ, ನ್ಯಾಯಾಂಗದ ಟೀಕೆ ದೇಶದ್ರೋಹವಲ್ಲ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ

Update: 2019-09-08 06:44 GMT

ಅಹ್ಮದಾಬಾದ್: ಸರ್ಕಾರವನ್ನು ಟೀಕಿಸುವ ಹಕ್ಕು ಭಾರತೀಯ ನಾಗರಿಕರಿಗೆ ಇದೆ. ಇಂಥ ಟೀಕೆಗಳು ದೇಶದ್ರೋಹ ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಗುಪ್ತಾ ಸ್ಪಷ್ಟಪಡಿಸಿದ್ದಾರೆ.

ಅಹ್ಮದಾಬಾದ್‌ನಲ್ಲಿ ಆಯೋಜಿಸಿದ್ದ ವಕೀಲರ ಕಾರ್ಯಾಗಾರದಲ್ಲಿ ಮಾತನಾಡಿದ ನ್ಯಾಯಮೂರ್ತಿಗಳು ಈ ಹೇಳಿಕೆ ನೀಡಿದ್ದಾರೆ ಎಂದು "ದಿ ಇಂಡಿಯನ್ ಎಕ್ಸ್‌ಪ್ರೆಸ್" ವರದಿ ಮಾಡಿದೆ.

"ದೇಶದ್ರೋಹ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ" ಎಂಬ ವಿಷಯದ ಬಗೆಗೆ ಮಾತು ಆರಂಭಿಸುವಾಗಲೇ, "ಇದು ನನ್ನ ವೈಯಕ್ತಿಕ ಅಭಿಪ್ರಾಯವೇ ವಿನಃ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನಾನು ಇದನ್ನು ಹೇಳುತ್ತಿಲ್ಲ. ಕಾರ್ಯಾಂಗ, ನ್ಯಾಯಾಂಗ ಅಥವಾ ಅಧಿಕಾರ ವರ್ಗ, ಸಶಸ್ತ್ರ ಪಡೆಗಳನ್ನು ಟೀಕಿಸುವುದನ್ನು ದೇಶದ್ರೋಹ ಎಂದು ಕರೆಯುವಂತಿಲ್ಲ" ಎಂದು ಸ್ಪಷ್ಟಪಡಿಸಿದರು.

"ಈ ಸಂಸ್ಥೆಗಳ ಟೀಕೆಯನ್ನು ನಾವು ನಿಗ್ರಹಿಸಿದರೆ ಅದು ಪ್ರಜಾಪ್ರಭುತ್ವದ ಬದಲಾಗಿ ಪೊಲೀಸ್ ರಾಜ್ಯವಾಗುತ್ತದೆ" ಎಂದು ಹೇಳಿದರು.
"ನನಗೆ, ಸಂವಿಧಾನದಲ್ಲಿ ಉಲ್ಲೇಖಿಸದ ಅತ್ಯಂತ ಮಹತ್ವದ ಹಕ್ಕು ಇದೆ... ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕು, ಆತ್ಮಪ್ರಜ್ಞೆಯ ಸ್ವಾತಂತ್ರ್ಯದ ಹಕ್ಕು, ಇದು ನಿಜವಾಗಿ ಅತ್ಯಂತ ಮಹತ್ವದ ಹಕ್ಕು ಎನಿಸಿದ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನೂ ಒಳಗೊಂಡಿದೆ" ಎಂದು ಗುಪ್ತಾ ವಿಶ್ಲೇಷಿಸಿದರು.

"ಹೊಸ ಚಿಂತಕರು ಹುಟ್ಟಿಕೊಂಡದ್ದೇ, ಸಮಾಜದಲ್ಲಿ ಸ್ವೀಕೃತವಾದ ರೂಢಿಗಳನ್ನು ಒಪ್ಪಿಕೊಳ್ಳದ ಕಾರಣದಿಂದ. ಸವಕಲು ದಾರಿಯಲ್ಲೇ ಎಲ್ಲರೂ ತುಳಿದರೆ, ಹೊಸ ಮಾರ್ಗಗಳು ಸೃಷ್ಟಿಯೇ ಆಗುವುದಿಲ್ಲ. ಹೊಸ ದೃಷ್ಟಿಕೋನ ಅಥವಾ ಚಿಂತನೆ ಕಾಣಿಸುವುದೇ ಇಲ್ಲ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News