ತೆಲಂಗಾಣದ ರಾಜ್ಯಪಾಲರಾಗಿ ಡಾ.ತಮಿಳಿಸೈ ಅಧಿಕಾರ ಸ್ವೀಕಾರ
ಹೈದರಾಬಾದ್ , ಸೆ.8: ತೆಲಂಗಾಣ ರಾಜ್ಯದ ನೂತನ ರಾಜ್ಯಪಾಲರಾಗಿ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷೆ ಡಾ. ತಮಿಳಿಸೈ ಸೌಂದರಾಜನ್ ರವಿವಾರ ಪ್ರಮಾಣ ವಚನ ಸ್ವೀಕರಿಸಿದರು.
ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ತಮಿಳುನಾಡು ಉಪಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಮತ್ತು ಸಚಿವರಾದ ಡಿ.ಜಯಕುಮಾರ್ ಮತ್ತು ತಂಗಮಣಿ ಅವರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸೆಪ್ಟೆಂಬರ್ 1 ರಂದು ತಮಿಳಿಸೈ ಅವರನ್ನು ತೆಲಂಗಾಣದ ಮುಂದಿನ ಗವರ್ನರ್ ಆಗಿ ನೇಮಕ ಮಾಡಲಾಗಿತ್ತು., ಬಳಿಕ ಅವರು ತಮಿಳುನಾಡಿನ ಬಿಜೆಪಿ ಅಧ್ಯಕ್ಷೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
1999 ರಲ್ಲಿ ದಕ್ಷಿಣ ಚೆನ್ನೈ ಜಿಲ್ಲಾ ವೈದ್ಯಕೀಯ ಸಂಘದ ಕಾರ್ಯದರ್ಶಿಯಾಗಿದ್ದರು. ಆಗಸ್ಟ್ 2014 ರಲ್ಲಿ ತಮಿಳುನಾಡು ಬಿಜೆಪಿಯ ರಾಜ್ಯ ಅಧ್ಯಕ್ಷೆಯಾಗಿ ನೇಮಕಗೊಂಡರು. ವೃತ್ತಿಯಲ್ಲಿ ವೈದ್ಯರಾದ ತಮಿಳಿಸೈ ಕಾಂಗ್ರೆಸ್ ಮುಖಂಡ ಕುಮಾರಿ ಅನಂತನ್ ಅವರ ಪುತ್ರಿ ಮತ್ತು ಕಾಂಗ್ರೆಸ್ ಸಂಸದ ಎಚ್ ವಸಂತಕುಮಾರ್ ಅವರ ಸೋದರ ಸೊಸೆ.
ತಮಿಳಿಸೈ ಅವರು 2014 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದರು. ಮುಂದೆ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡರು. ಅವರು ರಾಜ್ಯ ಬಿಜೆಪಿಯ ಮೊದಲ ಮಹಿಳಾ ಅಧ್ಯಕ್ಷರಾಗಿದ್ದರು.