ಗ್ರಾಹಕ ನೆರವು ತಂಡದ 541 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದ ಝೊಮ್ಯಾಟೊ
ಹೊಸದಿಲ್ಲಿ: ಆಹಾರ ವಿತರಣೆ ಪ್ಲಾಟ್‌ಫಾರಂ ಝೊಮ್ಯಾಟೊ, ಗ್ರಾಹಕ, ವ್ಯಾಪಾರಿ ಮತ್ತು ವಿತರಣಾ ಪಾಲುದಾರ ನೆರವು ವಿಭಾಗಗಳ ತನ್ನ ಒಟ್ಟು ಉದ್ಯೋಗಿ ಬಲದ ಶೇಕಡ 10ರಷ್ಟು ಮಂದಿಯನ್ನು ಅಂದರೆ 541 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟೆಲಿಜೆನ್ಸ್) ಚಾಲಿತ ಬಾಟ್ಸ್ ಮತ್ತು ಗ್ರಾಹಕರ ಹೇಳಿಕೆಗಳನ್ನು ಬಗೆಹರಿಸುವ ಸ್ವಯಂಚಾಲಿತ ವ್ಯವಸ್ಥೆಯನ್ನು ಅಳವಡಿಸಿಕೊಂಡು ಝೊಮ್ಯಾಟೊ ಪ್ಲಾಟ್‌ಫಾರಂ ಸುಧಾರಿಸಿದ ಹಿನ್ನೆಲೆಯಲ್ಲಿ, ಈ ಕ್ರಮ ಕೈಗೊಂಡಿದೆ. ಆಧುನಿಕ ವ್ಯವಸ್ಥೆಯಿಂದಾಗಿ ನೇರ ಕಾರ್ಯಾದೇಶ ಸಂಬಂಧಿತ ನೆರವು ಕೋರಿಕೆಗಳು ಕಡಿಮೆಯಾಗಿವೆ ಎಂದು ಕಂಪನಿ ಹೇಳಿಕೆ ನೀಡಿದೆ.
"ಇದು ಅತ್ಯಂತ ನೋವುದಾಯಕ ನಿರ್ಧಾರವಾಗಿದ್ದು, ಈ ವರ್ಗಾಂತರವನ್ನು ಸುಲಲಿತಗೊಳಿಸಲು ಈ ಉದ್ಯೋಗಿಗಳಿಗೆ ಎರಡು ತಿಂಗಳ ಅಗಲಿಕೆ ವೇತನ, 2020ರ ಜನವರಿವರೆಗೆ ಕುಟುಂಬ ಆರೋಗ್ಯ ವಿಮಾ ಸುರಕ್ಷೆ ಮತ್ತು ಕಂಪನಿಗಳ ಜತೆ ವೃತ್ತಿಸಮ್ಮತ ಅವಕಾಶಗಳನ್ನು ನೀಡುತ್ತಿದ್ದೇವೆ" ಎಂದು ಝೊಮ್ಯಾಟೊ ಸ್ಪಷ್ಟಪಡಿಸಿದೆ.
ಝೊಮ್ಯಾಟೊ ವಿವಿಧ ಕಾರ್ಯಗಳಿಗಾಗಿ 1200ಕ್ಕೂ ಹೆಚ್ಚು ಮಂದಿಯನ್ನು ವಿತರಕ ಪಾಲುದಾರರ ಹೊರತಾಗಿ ನೇಮಕ ಮಾಡಿಕೊಂಡಿದ್ದು, 400ಕ್ಕೂ ಹೆಚ್ಚು ಮಂದಿಯನ್ನು ಇತರ ಉದ್ದೇಶಕ್ಕೆ ನೇಮಿಸಿಕೊಂಡಿದೆ. ಇದೀಗ ತಂತ್ರಜ್ಞಾನ, ಉತ್ಪನ್ನ ಮತ್ತು ದತ್ತಾಂಶ ವಿಜ್ಞಾನ ತಂಡಕ್ಕೆ ಹೆಚ್ಚಿನ ಮಂದಿಯನ್ನು ನೇಮಕ ಮಾಡಿಕೊಳ್ಳುತ್ತಿದೆ.
ಕಂಪೆನಿ ಇದೀಗ ತನ್ನ ಮಹತ್ವಾಕಾಂಕ್ಷಿ ಗೋಲ್ಡ್ ಪ್ರೋಗ್ರಾಂ ಯೋಜನೆಯನ್ನು ಹಲವು ನಗರಗಳಲ್ಲಿ ಪರಿಚಯಿಸಲು ಮುಂದಾಗಿದೆ.