ದಿಲ್ಲಿ ವಿವಿ ಪ್ರೊಫೆಸರ್ ವಿರುದ್ಧ ಕ್ರಮಕ್ಕೆ ಪಿಯುಸಿಎಲ್ ಖಂಡನೆ

Update: 2019-09-11 14:29 GMT

ಹೊಸದಿಲ್ಲಿ,ಸೆ.11: ಭೀಮಾ-ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ವಿವಿಯ ಪ್ರೊಫೆಸರ್ ಹ್ಯಾನಿ ಬಾಬು ಅವರ ವಿರುದ್ಧ ಪೊಲೀಸ್ ಕ್ರಮವನ್ನು ಖಂಡಿಸಿರುವ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್),ಸರಕಾರವು ಒಂದಲ್ಲ ಒಂದು ರೀತಿಯಲ್ಲಿ ಅವರ ವಿರುದ್ಧ ಅಪರಾಧವನ್ನು ಆರೋಪಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.

ಮಂಗಳವಾರ ಪುಣೆ ಪೊಲೀಸರು ಭೀಮಾ-ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬು ಅವರ ನೊಯ್ದ ನಿವಾಸದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದು,ಇದಕ್ಕಾಗಿ ಅವರ ಬಳಿ ಯಾವುದೇ ಸರ್ಚ್ ವಾರಂಟ್ ಇರಲಿಲ್ಲವೆನ್ನಲಾಗಿದೆ. ಮಾವೋವಾದಿ ಸಂಪರ್ಕಗಳಿಗಾಗಿ ಮಾರ್ಚ್,2017ರಲ್ಲಿ ಆರೋಪಿಯೆಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟಿರುವ ಇನ್ನೋರ್ವ ಪ್ರೊಫೆಸರ್ ಜಿ.ಎನ್.ಸಾಯಿಬಾಬಾ ಮತ್ತು ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಈಗಾಗಲೇ ಬಂಧನದಲ್ಲಿರುವವರ ಜೊತೆ ಬಾಬು ಸಂಪರ್ಕದಲ್ಲಿದ್ದರು ಎನ್ನುವುದು ಪೊಲೀಸರ ಆರೋಪವಾಗಿದೆ.

 ಭೀಮಾ-ಕೋರೆಗಾಂವ್ ಹೆಸರಿನಲ್ಲಿ ಪ್ರಜಾಪ್ರಭುತ್ವದ ಅಂತ್ಯವಿಲ್ಲದ ವಿಚಾರಣೆ ಮತ್ತು ಸಂವಿಧಾನ ಹಾಗೂ ಕಾನೂನಿನ ಆಡಳಿತದ ಮೇಲೆ ವಿವೇಚನೆಯಿಲ್ಲದ ದಾಳಿ ಹಾಗೂ ಪ್ರಕರಣದಲ್ಲಿ ಸರಕಾರದ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ಪ್ರಶ್ನಿಸುವ ಶಿಕ್ಷಣ ತಜ್ಞರು ಮತ್ತು ಪ್ರಜೆಗಳ ವಿರುದ್ಧ ಮೆಕಾರ್ಥಿ ಶೈಲಿಯಲ್ಲಿ ಪ್ರತೀಕಾರ ಎಗ್ಗಿಲ್ಲದೆ ಮುಂದುವರಿಯುತ್ತಿವೆ ಎಂದು ಪಿಯುಸಿಎಲ್ ಹೇಳಿದೆ.

ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಬಾಬು ಕುಟುಂಬ ಸದಸ್ಯರು ವಕೀಲರು ಮತ್ತು ಸ್ನೇಹಿತರಿಗೆ ಕರೆ ಮಾಡುವುದನ್ನು ತಡೆಯಲು ಪೊಲೀಸರು ಅವರ ಫೋನ್‌ ಗಳನ್ನು ವಶಪಡಿಸಿಕೊಂಡಿದ್ದು, ಆಘಾತಕಾರಿ ಎಂದು ಹೇಳಿರುವ ಪಿಯುಸಿಎಲ್,ಇದು ಪುಣೆ ಪೊಲೀಸರಿಂದ ಕಾನೂನಿನ ರಾಜಾರೋಷ ದುರುಪಯೋಗ ಮತ್ತು ಅತಿರೇಕದ ಕ್ರಮವಾಗಿದೆ. ಸರಕಾರದ ಇಂತಹ ಕ್ರಮಗಳು ಮತ್ತು ತಂತ್ರಗಳು ಪ್ರಜೆಗಳ ಸಂವಿಧಾನಾತ್ಮಕ ಹಕ್ಕುಗಳನ್ನು ದಮನಿಸುತ್ತವೆ ಮತ್ತು ಸರಕಾರಿ ಭಯೋತ್ಪಾದನೆಗೆ ಸಮವಾಗಿದೆ ಎಂದಿದೆ.

ಬಾಬು ಅವರಿಗೆ ಎಲ್ಗಾರ್ ಪರಿಷದ್‌ನೊಂದಿಗೆ ಯಾವುದೇ ಸಂಬಂಧವಿಲ್ಲ ಹಾಗೂ ಪ್ರಮುಖ ಆರೋಪಿಗಳಾಗಿರುವ ಹಿಂದುತ್ವ ನಾಯಕರಾದ ಸಂಭಾಜಿ ಭಿಡೆ ಮತ್ತು ಮಿಲಿಂದ ಏಕಬೋಟೆ ಅವರು ಸ್ವಚ್ಛಂದವಾಗಿ ತಿರುಗಾಡಿಕೊಂಡಿದ್ದಾರೆ ಎಂದೂ ಪಿಯುಸಿಎಲ್ ಹೇಳಿದೆ.

*ಜೆಟಿಎಸ್‌ಎ ಖಂಡನೆ

 ಕಾನೂನು ವಿಧಿವಿಧಾನಗಳನ್ನು ಕಡೆಗಣಿಸಿ ಬಾಬು ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಆರೋಪಿಸಿರುವ ಜಾಮಿಯಾ ಟೀಚರ್ಸ್ ಸಾಲಿಡಾರಿಟಿ ಅಸೋಸಿಯೇಷನ್(ಜೆಟಿಎಸ್‌ಎ),ಸಾಮಾಜಿಕ ಹೋರಾಟಗಾರರು ಮತ್ತು ಸರಕಾರದ ಟೀಕಾಕಾರರನ್ನು ಮೌನವಾಗಿಸಲು,ಬೆದರಿಸಲು ಮತ್ತು ಬಂಧಿಸಲು ಕಾನೂನುಗಳನ್ನು ಹೇಗೆ ದುರುಪಯೋಗಿಸಲಾಗುತ್ತಿದೆ ಎನ್ನುವುದಕ್ಕೆ ಭೀಮಾ-ಕೋರೆಗಾಂವ್ ಪ್ರಕರಣವು ನಿದರ್ಶನವಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News