ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತಗೊಂಡಿದ್ದು 2.1 ಕಿ.ಮೀ ದೂರದಲ್ಲಿದ್ದಾಗ ಅಲ್ಲ !

Update: 2019-09-12 03:55 GMT

ಚೆನ್ನೈ, ಸೆ.12: ಚಂದ್ರಯಾನ-2 ಮಿಷನ್‌ನ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿದುಕೊಂಡಿದ್ದು ಚಂದ್ರನ ಮೇಲ್ಮೈನಿಂದ ಕೇವಲ 335 ಮೀಟರ್ ಅಂತರದಲ್ಲಿ ಎಂಬ ಕುತೂಹಲಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ಇದುವರೆಗೂ ಚಂದ್ರನ ಮೇಲ್ಮೈನಿಂದ 2.1 ಕಿಲೋಮೀಟರ್ ದೂರದಲ್ಲಿದ್ದಾಗ ಸಂಪರ್ಕ ಕಡಿತವಾಗಿತ್ತು ಎಂಬ ಮಾಹಿತಿ ಇತ್ತು.

ವಿಕ್ರಮ್ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಚಂದ್ರನ ಮೇಲ್ಮೈನಲ್ಲಿ ಇಳಿಸಲು ಇಸ್ರೋ ವಿಜ್ಞಾನಿಗಳು ವಿಫಲರಾದರೂ, ಅವರ ಪ್ರಯತ್ನಕ್ಕೆ ಜಾಗತಿಕವಾಗಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು. ಚಂದ್ರನ ಮೇಲ್ಮೈನಲ್ಲಿ ಸುಲಲಿತವಾಗಿ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದರಿಂದ ಭಾರತ ಕೂದಲೆಳೆ ಅಂತರದಲ್ಲಿ ವಂಚಿತವಾಗಿತ್ತು. ಆದರೆ ಕೊನೆಕ್ಷಣದ ಅವಘಡಕ್ಕೆ ಏನು ಕಾರಣ ಎನ್ನುವ ಬಗ್ಗೆ ಇಸ್ರೋ ವಿಜ್ಞಾನಿಗಳು ಇನ್ನೂ ಮಾಹಿತ ಹೊರಬಿಟ್ಟಿಲ್ಲ.

ಚಂದ್ರನ ಮೇಲ್ಮೈನಿಂದ 2.1 ಕಿಲೋಮೀಟರ್ ಎತ್ತರದವರೆಗೂ ಎಲ್ಲವೂ ಸುಗಮವಾಗಿಯೇ ಇತ್ತು ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ 2.1 ಕಿಲೋಮೀಟರ್ ಅಂತರದಲ್ಲಿ ವಿಕ್ರಮ್ ಸಂಪರ್ಕ ಕಡಿತವಾಗಿತ್ತು ಎಂದೇ ವಿಶ್ಲೇಷಿಸಲಾಗಿತ್ತು.

ಆದರೆ ಇಸ್ರೋದ ಹಿರಿಯ ಸಲಹೆಗಾರ ತಪನ್ ಮಿಶ್ರಾ ಇದೀಗ, ವಿಕ್ರಮ್ ಸಂಪರ್ಕ ತಪ್ಪಿರುವುದು ಕೇವಲ 335 ಮೀಟರ್ ಅಂತರದಲ್ಲಿ ಎಂಬ ಹೊಸ ಕುತೂಹಲಕಾರಿ ಮಾಹಿತಿ ಹೊರಗೆಡವಿದ್ದಾರೆ. ಕೊನೆಯ ಹದಿನೈದು ನಿಮಿಷಗಳ ಭಯಾನಕ ಕಾರ್ಯಾಚರಣೆ ವೇಳೆ ಲ್ಯಾಂಡರ್ ಬುಡಮೇಲಾಗಿ ಚಂದ್ರನ ಮೇಲೆ ಬಿತ್ತು ಎಂದು ಅವರು ಫೇಸ್‌ಬುಕ್ ಪೇಜ್‌ನಲ್ಲಿ ನೀಡಿದ ವಿವರವಾದ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News