ಭಾರತೀಯ ಮೂಲದ 312 ಸಿಖ್ ವ್ಯಕ್ತಿಗಳ ಹೆಸರನ್ನು ಕಪ್ಪು ಪಟ್ಟಿಯಿಂದ ತೆಗೆದ ಕೇಂದ್ರ ಸರಕಾರ

Update: 2019-09-13 17:06 GMT

ಹೊಸದಿಲ್ಲಿ, ಸೆ.13: ಭಾರತೀಯ ಮೂಲದ 312 ಸಿಖ್ ವ್ಯಕ್ತಿಗಳ ಹೆಸರನ್ನು ಕಪ್ಪು ಪಟ್ಟಿಯಿಂದ ತೆಗೆದಿದ್ದು, ಈಗ ಈ ಪಟ್ಟಿಯಲ್ಲಿ ಕೇವಲ ಇಬ್ಬರ ಹೆಸರು ಮಾತ್ರವಿದೆ ಎಂದು ಗೃಹ ಇಲಾಖೆ ತಿಳಿಸಿದೆ. ಕಪ್ಪುಪಟ್ಟಿಗೆ ಸೇರ್ಪಡೆಗೊಂಡಿರುವ ಬಹುತೇಕ ಸಿಖ್ ವ್ಯಕ್ತಿಗಳು ಅಮೆರಿಕ, ಕೆನಡಾ, ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ನೆಲೆಸಿರುವವರು. ಖಲಿಸ್ತಾನ ಚಳವಳಿ ಬೆಂಬಲಿಸಿದವರು ಹಾಗೂ ಈ ಹಿಂದೆ ಉಗ್ರಗಾಮಿಗಳಾಗಿ ಗುರುತಿಸಿಕೊಂಡವರನ್ನು ಭಾರತ ಸರಕಾರ ಕಪ್ಪು ಪಟ್ಟಿಗೆ ಸೇರಿಸಿದೆ. ಕಪ್ಪು ಪಟ್ಟಿಯಿಂದ ಹೊರಬಂದವರು ಭಾರತದ ವೀಸಾಕ್ಕೆ ಅರ್ಜಿ ಸಲ್ಲಿಸಿ ಭಾರತಕ್ಕೆ ಭೇಟಿ ನೀಡಬಹುದಾಗಿದೆ . ಈ ಕುರಿತ ಸೂಚನೆಯನ್ನು ವಿದೇಶದಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ರವಾನಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರ ಕಪ್ಪು ಪಟ್ಟಿಯನ್ನು ಗುಪ್ತಚರ ಏಜೆನ್ಸಿಗಳು ಸಿದ್ಧಗೊಳಿಸುತ್ತವೆ ಮತ್ತು ಇವನ್ನು ವಿದೇಶದಲ್ಲಿರುವ ಭಾರತೀಯ ದೂತಾವಾಸದ ದಾಖಲೆಗಳಲ್ಲಿ ಸೇರಿಸಲಾಗುತ್ತದೆ. ಕಪ್ಪು ಪಟ್ಟಿಯಲ್ಲಿಯ ವ್ಯಕ್ತಿಗಳಿಗೆ ಮಾತ್ರವಲ್ಲ, ಅವರ ಕುಟುಂಬದ ಸದಸ್ಯರಿಗೂ ವೀಸಾ ಪಡೆಯಲು ಸಮಸ್ಯೆಯಾಗುತ್ತದೆ. ಪಟ್ಟಿಯಲ್ಲಿ ಹೆಸರು ನಮೂದಿಸಲ್ಪಟ್ಟವರು ಇನ್ನು ಸಾಗರೋತ್ತರ ನಾಗರಿಕರೆಂದು ನೋಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಇವರಿಗೆ ಭಾರತದಲ್ಲಿ 2 ವರ್ಷ ವಾಸಿಸಬಹುದಾದ ಸಾಮಾನ್ಯ ವೀಸಾ ದೊರಕುತ್ತದೆ. ಪಟ್ಟಿಯ ಪರಿಶೀಲನೆ ನಿರಂತರ ಮತ್ತು ಸಕ್ರಿಯ ಪ್ರಕ್ರಿಯೆಯಾಗಿದ್ದು ಇದರಿಂದ ಸಿಖ್ ವಿದೇಶಿ ನಾಗರಿಕರು ಭಾರತಕ್ಕೆ ಭೇಟಿ ನೀಡಿ ತಮ್ಮ ಕುಟುಂಬದವರನ್ನು ಭೇಟಿಯಾಗುವ ಅವಕಾಶ ದೊರಕುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News