ಇಡೀ ದೇಶವನ್ನು ಒಂದುಗೂಡಿಸುವ ಶಕ್ತಿ ಹಿಂದಿ ಭಾಷೆಗಿದೆ: ಅಮಿತ್ ಶಾ

Update: 2019-09-14 08:02 GMT

ಹೊಸದಿಲ್ಲಿ, ಸೆ.14: ಬಹುಪಾಲು ಹಿಂದಿ ಭಾಷಿಕರಿಂದ ‘ಹಿಂದಿ ದಿವಸ್’ ಎಂದು ಆಚರಿಸಲಾಗುವ ಸೆಪ್ಟಂಬರ್ 14 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿರುವ ಒಂದು ಟ್ವೀಟ್ ಇದೀಗ ಸಾಕಷ್ಟು ಚರ್ಚೆಗೆ ಹಾಗೂ ವಿವಾದಕ್ಕೆ ವೇದಿಕೆ ಕಲ್ಪಿಸಿದೆ. ಅಲ್ಲದೆ ಭಾರತದ ಇತಿಹಾಸದ ಕಡೆಗೆ ಮತ್ತೆ ಗಮನ ಹರಿಸುವಂತೆ ಮಾಡಿದೆ.
ಇಂದು ‘ಹಿಂದಿ ದಿವಸ್’ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡುವ ಮುಖಾಂತರ ತನ್ನ ಅಭಿಪ್ರಾಯವನ್ನು ಹೊರಹಾಕಿರುವ ಅಮಿತ್ ಶಾ,‘’ಭಾರತವು ವಿಭಿನ್ನ ಭಾಷೆಗಳ ದೇಶವಾಗಿದೆ. ಪ್ರತಿಯೊಂದೂ ಭಾಷೆಗೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ, ಇಂದು ಇಡೀ ಜಗತ್ತು ಭಾರತವನ್ನು ಗುರುತಿಸಲು ಏಕಮಾತ್ರ ಭಾಷೆಯ ಅಗತ್ಯವಿದೆ. ಹೀಗೆ ಇಡೀ ದೇಶವನ್ನು ಒಂದು ಭಾಷೆಯ ಅಡಿಯಲ್ಲಿ ಒಂದುಗೂಡಿಸುವ ಶಕ್ತಿ ಹಿಂದಿ ಭಾಷೆಗೆ ಇದೆ. ಅಲ್ಲದೆ ಇದು ದೇಶದಲ್ಲಿ ಅತ್ಯಂತ ಹೆಚ್ಚು ಜನ ಮಾತನಾಡುವ ಭಾಷೆಯೂ ಆಗಿದೆ’’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿ ದಿವಸದ ನಿಮಿತ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾ, ತನ್ನ ಟ್ವೀಟನ್ನು ಪುರಾವರ್ತಿಸಿದ್ದಲ್ಲದೆ, ಹಿಂದಿ ಭಾಷೆಯ ಬಳಕೆಯನ್ನು ಹೆಚ್ಚಳ ಮಾಡುವ ಮೂಲಕ ಮಹಾತ್ಮಗಾಂಧಿ ಹಾಗೂ ಸರ್ದಾರ್ ಪಟೇಲ್ ಅವರ ಒಂದೇ ದೇಶ, ಒಂದೇ ಭಾಷೆಯ ಕನಸಿಗೆ ಜೀವ ತುಂಬಬೇಕು ಎಂದು ಜನರನ್ನು ವಿನಂತಿಸಿದರು.
ಶಾ ತನ್ನ ಟ್ವೀಟ್ ಹಾಗೂ ಹೇಳಿಕೆಯ ಮೂಲಕ, ಏಕ ದೇಶ, ಏಕ ಭಾಷೆ ಎನ್ನುವ ಪರಿಕಲ್ಪನೆಗೆ ಶಕ್ತಿ ತುಂಬಲು ಮುಂದಾಗಿದ್ದಾರೆ. ಈ ಮೂಲಕ ಹಿಂದಿಯೇತರ ಭಾಷಿಕ ವರ್ಗದ ಕಂಗೆಣ್ಣಿಗೆ ಗುರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News