ಅಹ್ಮದಾಬಾದ್‌ನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣ

Update: 2019-09-14 18:27 GMT

ಹೊಸದಿಲ್ಲಿ, ಸೆ.14: ಆಸ್ಟ್ರೇಲಿಯದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ(ಎಂಸಿಜಿ) ಹೆಸರಲ್ಲಿರುವ ವಿಶ್ವದ ದೊಡ್ಡ ಕ್ರಿಕೆಟ್ ಕ್ರೀಡಾಂಗಣವೆಂಬ ಹಣೆಪಟ್ಟಿ ಅತ್ಯಂತ ಶೀಘ್ರದಲ್ಲಿ ಭಾರತದ ಸ್ಟೇಡಿಯಂಗೆ ಸಿಗಲಿದೆ. ಈ ಗೌರವಕ್ಕೆ ಪಾತ್ರವಾಗಲಿರುವ ಮೊಟೆರಾ ಸ್ಟೇಡಿಯಂನ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.

ಶೇ.90ರಷ್ಟು ಕಾಮಗಾರಿ ಈಗಾಗಲೇ ಮುಗಿದಿದೆ. ಮೊಟೆರಾ ಸ್ಟೇಡಿಯಂ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಜೊತೆಗೆ ವಿಶ್ವ ದರ್ಜೆಯ ವ್ಯವಸ್ಥೆಗಳನ್ನು ಹೊಂದಿದೆ.

ಸ್ಟೇಡಿಯಂನ ಆಸನ ಸಾಮರ್ಥ್ಯ 1,10,000. ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿರುವ ಪ್ರತಿಷ್ಠಿತ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನ ಆಸನ ಸಾಮರ್ಥ್ಯ ಸುಮಾರು 95,000.

ಕುತೂಹಲಕಾರಿ ಅಂಶವೆಂದರೆ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನ್ನು ನಿರ್ಮಿಸಿರುವ ಆಸ್ಟ್ರೇಲಿಯದ ಕಂಪೆನಿ ಗುಜರಾತ್ ಕ್ರಿಕೆಟ್ ಸಂಸ್ಥೆಯ ಮೊಟೆರಾ ಸ್ಟೇಡಿಯಂ ನಿರ್ಮಾಣದ ಹೊಣೆ ಹೊತ್ತಿದೆ.

ಸ್ಟೇಡಿಯಂನ ಒಟ್ಟು ನಿರ್ಮಾಣ ವೆಚ್ಚ 700 ಕೋ.ರೂ. ಸ್ಟೇಡಿಯಂನ ಸುತ್ತಮುತ್ತಲಿನ ಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದು, 2020ರ ಜನವರಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಗುಜರಾತ್‌ನಲ್ಲಿ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಇರಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸನ್ನು ಈಡೇರಿಸಲು ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಮಿತ್ ಶಾ, ಹಿರಿಯ ಉಪಾಧ್ಯಕ್ಷ ಪರಿಮಳ್ ನಥ್ವಾನಿ ಹಾಗೂ ಜೊತೆ ಕಾರ್ಯದರ್ಶಿ ಜಯ ಶಾ ಎಲ್ಲ ಬೆಳವಣಿಗೆಯ ಮೇಲೆ ಕಣ್ಣಿಟ್ಟಿದ್ದು, ಯೋಜನೆಯ ಪ್ರತಿ ಹಂತದಲ್ಲೂ ಸಲಹೆ ಸೂಚನೆ ನೀಡುತ್ತಿದ್ದಾರೆ.

ನೂತನ ಮೊಟೆರಾ ಸ್ಟೇಡಿಯಂನ ವೈಶಿಷ್ಟ್ಯಗಳು

► ಆಸನ ಸಾಮರ್ಥ್ಯ 1,10,000. ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನ ಆಸನ ಸಾಮರ್ಥ್ಯ ಸುಮಾರು 95,000. ಭಾರತದ ಈಗಿನ ದೊಡ್ಡ ಕ್ರಿಕೆಟ್ ಸ್ಟೇಡಿಯಂ        ಕೋಲ್ಕತ್ತಾದ ಈಡನ್ ಗಾರ್ಡನ್ಸ್(62,000)

► ಗಣ್ಯರಿಗೆ 75 ಹವಾನಿಯಂತ್ರಿತ ಕೊಠಡಿಗಳು.

►  ಪ್ರತಿ ಸ್ಟಾಂಡ್‌ನಲ್ಲಿ ಆಹಾರ ಮಳಿಗೆ ಹಾಗೂ ಆತಿಥ್ಯತಾಣದ ವ್ಯವಸ್ಥೆ.

► ಕ್ರಿಕೆಟ್ ಅಕಾಡಮಿ.

► ಒಳಾಂಗಣ ಪ್ರಾಕ್ಟೀಸ್ ಪಿಚ್‌ಗಳು.

► ಭಾರತದಲ್ಲಿ ಇದೇ ಮೊದಲ ಬಾರಿ ಪೆವಿಲಿಯನ್‌ಗಳು, ಅತ್ಯಾಧುನಿಕ ಮಾಧ್ಯಮ ಕೊಠಡಿ ಹಾಗೂ ಆಡುವ ಮೈದಾನಕ್ಕೆ ಎಲ್‌ಇಡಿ ಲೈಟ್ಸ್.

► 3,000 ಕಾರುಗಳು ಹಾಗೂ 10,000 ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ. ಇದು ಸ್ಟೇಡಿಯಂ ಆವರಣದಲ್ಲಿ ನಿರ್ಮಿಸಿರುವ ಭಾರತದ ದೊಡ್ಡ ಪಾರ್ಕಿಂಗ್ ಪ್ರದೇಶವಾಗಿದೆ.

► 55 ಕೊಠಡಿಗಳ ಕ್ಲಬ್ ಹೌಸ್, ಒಳಾಂಗಣ ಹಾಗೂ ಹೊರಾಂಗಣ ಗೇಮ್ಸ್, ರೆಸ್ಟೋರೆಂಟ್‌ಗಳು, ಒಲಿಂಪಿಕ್ಸ್ ಗಾತ್ರದ ಈಜು ಕೊಳ, ಜಿಮ್ನಾಸಿಯಂ, ಪಾರ್ಟಿ ಏರಿಯಾ, ತ್ರಿಡಿ ಪ್ರೊಜೆಕ್ಟರ್ *ಥಿಯೇಟರ್/ಟಿವಿ ರೂಮ್.

► ಸ್ಟೇಡಿಯಂಗೆ ಮೆಟ್ರೋ ಸಂಪರ್ಕ.

► ಎರಡು ಚಿಕ್ಕ ಪೆವಿಲಿಯನ್ ಇರುವ 

► ಸ್ಟೇಡಿಯಂಗೆ ಮೆಟ್ರೋ ಸಂಪರ್ಕ.

► ಎರಡು ಚಿಕ್ಕ ಪೆವಿಲಿಯನ್ ಇರುವ ಇತರ ಎರಡು ಕ್ರಿಕೆಟ್ ಮೈದಾನ

ಫುಟ್ಬಾಲ್, ಹಾಕಿ, ಬಾಸ್ಕೆಟ್‌ಬಾಲ್, ಕಬಡ್ಡಿ, ಬಾಕ್ಸಿಂಗ್, ಲಾನ್ ಟೆನಿಸ್ ಹಾಗೂ ರನ್ನಿಂಗ್ ಟ್ರಾಕ್ ಸಹಿತ ಇತರ ಬಹು ಕ್ರೀಡೆಗಳಿಗೆ ವ್ಯವಸ್ಥೆಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News