ಮಧ್ಯಪ್ರದೇಶದ ಭಾರೀ ಮಳೆ, ನೆರೆ: ಸುಮಾರು 45,000 ಸಂತ್ರಸ್ತರ ಸ್ಥಳಾಂತರ

Update: 2019-09-16 16:55 GMT

 ಭೋಪಾಲ್, ಸೆ. 16: ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಜಲಾವೃತವಾದ ಪ್ರದೇಶಗಳಿಂದ ಸುಮಾರು 45,000 ಜನರನ್ನು ರವಿವಾರ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಭಾರೀ ಮಳೆಯಿಂದ ನೆರೆ ಸೃಷ್ಟಿಯಾಗಿರುವುದರಿಂದ ಮಂದಸೌರ್, ನಿಮಚ್ ಸಹಿತ ವಿವಿಧ ಜಿಲ್ಲೆಗಳಲ್ಲಿರುವ 150 ಪರಿಹಾರ ಕೇಂದ್ರಗಳಿಗೆ ಅವರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಕಾರ 100 ಕೋಟಿ ರೂಪಾಯಿ ನೆರವು ನೀಡಿದೆ. 325 ಕೋಟಿ ರೂಪಾಯಿಯನ್ನು ತುರ್ತು ಹಾಗೂ ಪರಿಹಾರ ಕಾರ್ಯಾಚರಣೆಗೆ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನೆರೆ ಸಂತ್ರಸ್ತ ಜಿಲ್ಲೆಗಳಾದ ಮಂದಸೌರ್ ನಿಮಚ್, ರತ್ಲಾಂ, ಆಗ್ರಾ-ಮಾಲಾ, ಶಯೋಪುರ, ದಾಮೋಹ್, ರೈಸೆನ್, ಅಶೋಕ್‌ನಗರ್, ಭಿಂದ್ ಹಾಗೂ ಶಾಜಾಪುರದಲ್ಲಿ ತೀವ್ರ ಗತಿಯಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

 ಮಾನಸ ಪಟ್ಟಣ ಹಾಗೂ ನಿಮಚ್‌ನಲ್ಲಿ ರವಿವಾರ ಬೆಳಗ್ಗೆ ವರೆಗೆ ಕಳೆದ 24 ಗಂಟೆಗಳಲ್ಲಿ 243 ಮಿಲ್ಲಿ ಮೀಟರ್ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಶ್ಚಿಮ ಮಧ್ಯಪ್ರದೇಶದ ಮಂದ್‌ಸೌರ್ ಹಾಗೂ ನಿಮಚ್ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಇಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

 ಮಂದ್‌ಸೂರ್‌ನ 100ರಿಂದ 125 ಗ್ರಾಮಗಳಿಂದ ಸುಮಾರು 13,000ದಿಂದ 14,000 ಜನರನ್ನು ಸ್ಥಳಾಂತರಿಸಲಾಗಿದೆ. ಕೆಲವು ಗ್ರಾಮಗಳನ್ನು ಸಂಪೂರ್ಣವಾಗಿ ಹಾಗೂ ಇನ್ನು ಕೆಲವು ಗ್ರಾಮಗಳನ್ನು ಭಾಗಶಃ ತೆರವುಗೊಳಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಹಿತೇಶ್ ಚೌಧರಿ ತಿಳಿಸಿದ್ದಾರೆ.

 ಜಿಲ್ಲಾ ಅಧಿಕಾರಿಗಳು ಹಾಗೂ ಪೊಲೀಸರು ಪರಿಸ್ಥಿತಿ ಬಗ್ಗೆ ತೀವ್ರ ನಿಗಾ ಇರಿಸಿದ್ದಾರೆ ಎಂದು ಚೌಧರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News