ಅಸ್ಸಾಂ ಪೊಲೀಸ್ ಔಟ್ ಪೋಸ್ಟ್ ನಲ್ಲಿ ಗರ್ಭಿಣಿ ಸಹಿತ ಮೂವರು ಸೋದರಿಯರನ್ನು ನಗ್ನಗೊಳಿಸಿ ಚಿತ್ರಹಿಂಸೆ

Update: 2019-09-18 17:51 GMT

 ಗುವಾಹಟಿ, ಸೆ.18: ತಮ್ಮನ್ನು ಠಾಣೆಯೊಳಗೆ ಕೂಡಿ ಹಾಕಿದ ಪೊಲೀಸರು ಬಟ್ಟೆಬಿಟ್ಟಿ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಮೂವರು ಸಹೋದರಿಯರು ಆರೋಪಿಸಿದ್ದಾರೆ. ಇವರಲ್ಲಿ ಒಬ್ಬ ಯುವತಿ ಗರ್ಭಿಣಿಯಾಗಿದ್ದು ಪೊಲೀಸ್ ದೌರ್ಜನ್ಯದಿಂದ ಗರ್ಭಪಾತವಾಗಿದೆ ಎಂದು ದೂರಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. 18, 28 ಮತ್ತು 30 ವರ್ಷದ ಈ ಮೂವರು ಸಹೋದರಿಯರು ಮುಸ್ಲಿಂ ಸಮುದಾಯದವರು. ಇವರ ಅಣ್ಣ ಹಿಂದು ಸಮುದಾಯದ ಯುವತಿಯನ್ನು ಅಪಹರಿಸಿದ್ದ ಎಂದು ದೂರು ದಾಖಲಾಗಿತ್ತು. ಈ ಬಗ್ಗೆ ಹೆಚ್ಚಿನ ವಿವರ ಪಡೆಯಲು ಅವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು ಠಾಣೆಯಲ್ಲಿ ದೌರ್ಜನ್ಯ ಎಸಗಿರುವ ದೂರನ್ನು ನಿರಾಕರಿಸಿದ್ದಾರೆ.

ತಮ್ಮನ್ನು ಠಾಣೆಯಲ್ಲಿ ಕೂಡಿ ಹಾಕಿ ವಿವಸ್ತ್ರಗೊಳಿಸಿ ಥಳಿಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಅಣ್ಣ ಹಾಗೂ ಹಿಂದು ಯುವತಿ ಠಾಣೆಗೆ ಹಾಜರಾದರು ಎಂದು ಸಹೋದರಿಯರು ತಿಳಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಸಹೋದರಿಯರನ್ನು ಯಾಕೆ ಥಳಿಸುತ್ತಿದ್ದೀರಿ ಎಂದು ಅಣ್ಣ ಪ್ರಶ್ನಿಸಿದಾಗ, ಜಾಸ್ತಿ ಮಾತನಾಡದೆ ಬಾಯ್ಮುಚ್ಚಿಕೊಂಡಿರು ಎಂದು ಪಿಸ್ತೂಲನ್ನು ಅಣ್ಣನ ತಲೆಗೆ ಗುರಿಯಿಟ್ಟರು. ಬಳಿಕ ಆತನನ್ನು ಜೈಲಿಗೆ ದೂಡಿದ್ದಾರೆ ಎಂದು ಆರೋಪಿಸಿರುವ ಮಹಿಳೆಯರು ಪೊಲೀಸರು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದಿದ್ದಾರೆ. ಅಲ್ಲದೆ ಪೊಲೀಸರ ಅಮಾನುಷ ಹಲ್ಲೆಯಿಂದ ತಮ್ಮ ಮೈತುಂಬಾ ಗಾಯಗಳಾಗಿವೆ ಎಂದಿದ್ದಾರೆ.

ತಮ್ಮಲ್ಲಿ ಒಬ್ಬ ಸಹೋದರಿ ಗರ್ಭಿಣಿ, ಆಕೆಯನ್ನು ಬಿಟ್ಟುಬಿಡಿ ಎಂದಾಗ ಪೊಲೀಸರು ಜಾಸ್ತಿ ನಾಟಕವಾಡಬೇಡಿ ಎಂದು ಗದರಿದ್ದಾರೆ. ಪೊಲೀಸರ ದೌರ್ಜನ್ಯದಿಂದ ಆಕೆಗೆ ಗರ್ಭಪಾತವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬುರ್ಹಾ ಪೊಲೀಸ್ ಹೊರಠಾಣೆಯ ಅಧಿಕಾರಿ ಮಹೇಂದ್ರ ಶರ್ಮ ಹಾಗೂ ಮಹಿಳಾ ಕಾನ್ಸ್‌ಟೇಬಲ್ ಬಿನಿತಾ ಬೊರೊರನ್ನು ಅಮಾನತುಗೊಳಿಸಲಾಗಿದೆ ಹಾಗೂ ಪ್ರಕರಣದ ಬಗ್ಗೆ ತನಿಖೆ ನಡೆಸಿ ವಾರದೊಳಗೆ ವರದಿ ಒಪ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಕುಲಾಧರ್ ಸೈಕಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News