ಭಾರತದ ಸೇನಾಧಿಕಾರಿಗಳ ಹೆಸರಿನಲ್ಲಿ ನಕಲಿ ಟ್ವಿಟರ್ ಹ್ಯಾಂಡಲ್

Update: 2019-09-18 05:16 GMT

ಹೊಸದಿಲ್ಲಿ, ಸೆ.18: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಕಿತ್ತು ಹಾಕಿದ ಕ್ರಮದ ವಿರುದ್ಧ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಸಮರ ಇದೀಗ ಸೈಬರ್ ಜಗತ್ತನ್ನೂ ವ್ಯಾಪಿಸಿದೆ. ಭಾರತೀಯ ಸೇನಾಧಿಕಾರಿಗಳ ನಕಲಿ ಸಾಮಾಜಿಕ ಜಾಲತಾಣಗಳನ್ನು ಸೃಷ್ಟಿಸಿ ಅಪಪ್ರಚಾರಕ್ಕೆ ಪಾಕಿಸ್ತಾನ ಕೈಹಾಕಿದೆ.

ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಸೇರಿದಂತೆ ಕನಿಷ್ಠ 50ಕ್ಕೂ ಹೆಚ್ಚು  ಉನ್ನತ ಸೇನಾಧಿಕಾರಿಗಳ ನಕಲಿ ವೈಯಕ್ತಿಕ ಟ್ವಿಟರ್ ಹ್ಯಾಂಡಲ್‌ಗಳು ಸೃಷ್ಟಿಯಾಗಿದ್ದು, ಕಾಶ್ಮೀರದಲ್ಲಿ ನಡೆಯುತ್ತಿದೆ ಎನ್ನಲಾದ ದೌರ್ಜನ್ಯಗಳನ್ನು ಇವು ಬಿಂಬಿಸಿವೆ. ಭದ್ರತಾ ಏಜೆನ್ಸಿಗಳ ಕೋರಿಕೆ ಮೇರೆಗೆ ಇವುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

"ಕಳೆದ ಆರು ದಿನಗಳಲ್ಲಿ ನಮ್ಮ 69 ಭಾರತೀಯ ಸೈನಿಕರು ಪಾಕಿಸ್ತಾನ ಸೇನೆಯ ಅಪ್ರಚೋದಿತ ದಾಳಿಯಿಂದ ಮೃತಪಟ್ಟಿದ್ದಾರೆ" ಎಂದು ಸೇವೆಯಲ್ಲಿರುವ ಕರ್ನಲ್ ಒಬ್ಬರ ನಕಲಿ ಟ್ವಿಟ್ಟರ್ ಹ್ಯಾಂಡಲ್‌ನಿಂದ ಟ್ವೀಟ್ ಆಗಿದೆ.

ಅಂತೆಯೇ ಮಿಲಿಟರಿ ಕಾರ್ಯಾಚರಣೆಗಳ ನಿವೃತ್ತ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ ಅವರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಖಾತೆಯಿಂದ, "ನಮ್ಮ ಗುಪ್ತಚರ ವರದಿಯ ಪ್ರಕಾರ, 700ಕ್ಕೂ ಹೆಚ್ಚು ಕಾಶ್ಮೀರಿಗಳ ಹತ್ಯೆಯಾಗಿದ್ದು, ಸಾವಿರಕ್ಕೂ ಅಧಿಕ ಮಹಿಳೆಯರ ಅತ್ಯಾಚಾರ ನಡೆದಿದೆ. ಸಂಪೂರ್ಣ ನಿರ್ಬಂಧವಿದ್ದು, ಶಾಲಾ ಕಾಲೇಜುಗಳು ಮುಚ್ಚಿವೆ. ನಮಗೆ ನಾಚಿಕೆಯಾಗುತ್ತಿದೆ" ಎಂದು ಟ್ವೀಟ್ ಮಾಡಲಾಗಿದೆ.

ಸಂವಿಧಾನದ 370ನೇ ವಿಧಿ ಕಿತ್ತುಹಾಕಿರುವುದು ದೊಡ್ಡ ಪ್ರಮಾದ ಎಂದು ಸೇನಾ ಸಿಬ್ಬಂದಿಯ ಮಾಜಿ ಉಪಮುಖ್ಯಸ್ಥ ದೇವರಾರ್ ಅನ್ಬು ಅವರ ಖಾತೆಯಿಂದ ಟ್ವೀಟ್ ಆಗಿದೆ. ಕುತೂಹಲದ ವಿಚಾರವೆಂದರೆ ಮಲೇಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದು ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಅವರ ಖಾತೆಯಿಂದ ಮಾಡಿದ ಟ್ವೀಟ್‌ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News