ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಅತ್ಯಂತ ಹೆಚ್ಚು ಬೆದರಿಕೆ ಎದುರಿಸುತ್ತಿದ್ದಾಳೆ: ಸಿಬಿಐ

Update: 2019-09-19 10:57 GMT
ಕುಲದೀಪ್ ಸೇಂಗರ್ 

ಹೊಸದಿಲ್ಲಿ, ಸೆ.19: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಅತ್ಯಂತ ಹೆಚ್ಚಿನ ಬೆದರಿಕೆ ಎದುರಿಸುತ್ತಿದ್ದಾಳೆಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಇಂದು ವಿಶೇಷ ನ್ಯಾಯಾಲಯಕ್ಕೆ ಹೇಳಿದೆ.

ಬೆದರಿಕೆಯ ಹಿನ್ನೆಲೆಯಲ್ಲಿ ಸಂತ್ರಸ್ತೆ ಮತ್ತಾಕೆಯ ಕುಟುಂಬವನ್ನು ರಾಜ್ಯದಲ್ಲಿ ಬೇರೆಡೆ ಅಥವಾ ನೆರೆಯ ರಾಜ್ಯಕ್ಕೆ ಸ್ಥಳಾಂತರಿಸಬಹುದೇ ಎಂಬ ಬಗ್ಗೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ನಂತರ ನ್ಯಾಯಾಲಯ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದೆ. ಜುಲೈ ತಿಂಗಳಲ್ಲಿ ನಡೆದ ಕಾರು ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಂದಿನಿಂದ ಯುವತಿ ಆಸ್ಪತ್ರೆಯಲ್ಲಿದ್ದು, ಈ ಅಪಘಾತ ಆಕೆಯನ್ನು ಕೊಲ್ಲಲು ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೇಂಗರ್ ಕಡೆಯವರು ನಡೆಸಿದ ಪೂರ್ವನಿಯೋಜಿತ ಕೃತ್ಯ ಎಂದು ಆಕೆಯ ಕುಟುಂಬ ಆರೋಪಿಸಿದ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ.

“ಸಂತ್ರಸ್ತೆ ಮತ್ತಾಕೆಯ ಕುಟುಂಬ `ಕೆಟಗರಿ ಎ ಬೆದರಿಕೆ' ಎದುರಿಸುತ್ತಿದೆ, ಆಕೆಗೆ ಸೂಕ್ತ ರಕ್ಷಣೆ ಒದಗಿಸಬೇಕು'' ಎಂದು ಸಿಬಿಐ ನ್ಯಾಯಾಲಯಕ್ಕೆ ಹೇಳಿದೆ.

ಸಂತ್ರಸ್ತೆ ದಾಖಲಾಗಿರುವ ಆಸ್ಪತ್ರೆಯಲ್ಲೇ ಇತ್ತೀಚೆಗೆ ಕೋರ್ಟ್ ರೂಂ ಸ್ಥಾಪಿಸಿ ಅಲ್ಲಿಗೆ ಆರೋಪಿಯನ್ನೂ ಕರೆಸಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಆಕೆ ಹೇಳಿಕೆ ನೀಡುವಾಗ ಆಕೆ ಹಾಗೂ ಆರೋಪಿಯ ನಡುವೆ ಒಂದು ಪರದೆಯನ್ನೂ ಹಾಕಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News