ಮೈತ್ರಿ ಮುರಿಯುವ ಬಗ್ಗೆ ಬಿಜೆಪಿಗೆ ಶಿವಸೇನೆ ಎಚ್ಚರಿಕೆ ನೀಡಿದ್ದು ಹೀಗೆ…

Update: 2019-09-19 14:07 GMT

ಮುಂಬೈ, ಸೆ.19: ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಿತ್ರಪಕ್ಷಗಳಾಗಿರುವ ಬಿಜೆಪಿ ಮತ್ತು ಶಿವಸೇನೆ ಸಮಾನವಾಗಿ ಸೀಟು ಹಂಚಿಕೊಳ್ಳಬೇಕು. ಇಲ್ಲದಿದ್ದರೆ ಮೈತ್ರಿ ಮುರಿದುಬೀಳಬಹುದು ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಅಮಿತ್ ಶಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉಪಸ್ಥಿತಿಯಲ್ಲಿ ನಡೆದ ಮಾತುಕತೆಯಲ್ಲಿ 50:50 ಸೂತ್ರಕ್ಕೆ ಒಪ್ಪಲಾಗಿತ್ತು. ಇದನ್ನು ಬಿಜೆಪಿ ಗೌರವಿಸಬೇಕು. ಮೈತ್ರಿ ಮುರಿಯುವ ಬಗ್ಗೆ ತಾನು ಮಾತನಾಡುತ್ತಿಲ್ಲ, ಆದರೆ ಹಿರಿಯ ಶಿವಸೇನೆ ಮುಖಂಡ ದಿವಾಕರ ರಾವೊಟೆ ಹೇಳಿದ್ದರಲ್ಲಿ ತಪ್ಪಿಲ್ಲ ಎಂಬುದಷ್ಟೇ ತನ್ನ ಅಭಿಪ್ರಾಯವಾಗಿದೆ ಎಂದು ರಾವತ್ ಹೇಳಿದ್ದಾರೆ.

ಸಮಾನ ಸೀಟು ಹಂಚಿಕೆಯಾಗದಿದ್ದಲ್ಲಿ ಮೈತ್ರಿ ಮುರಿದು ಬೀಳಬಹುದು ಎಂದು ರಾವೊಟೆ ಬುಧವಾರ ಹೇಳಿಕೆ ನೀಡಿದ್ದರು. 2014ರ ಚುನಾವಣೆಯಲ್ಲಿ ಸೀಟು ಹಂಚಿಕೆ ಸೂತ್ರದ ಬಗ್ಗೆ ಭಿನ್ನಮತ ಉಂಟಾದ ಹಿನ್ನೆಲೆಯಲ್ಲಿ ಉಭಯ ಪಕ್ಷಗಳೂ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಆದರೆ ಫಲಿತಾಂಶ ಹೊರಬಿದ್ದ ಬಳಿಕ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದವು. 288 ಸ್ಥಾನಬಲದ ಮಹಾರಾಷ್ಟ್ರ ವಿಧಾನಸಭೆಗೆ ಈ ವರ್ಷಾಂತ್ಯ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News