ಮುಂಬೈಯಾದ್ಯಂತ ಅನಿಲ ಸೋರಿಕೆಯ ವಾಸನೆ: ಆತಂಕಕ್ಕೀಡಾದ ಜನತೆ

Update: 2019-09-20 07:51 GMT

ಮುಂಬೈ, ಸೆ.20: ಪೊವಾಯಿಯಿಂದ ಮೀರಾರೋಡ್ ತನಕ ಪಶ್ಚಿಮ ಹಾಗೂ ಪೂರ್ವ ಉಪನಗರಗಳಲ್ಲಿ ಅನಿಲ ಸೋರಿಕೆಯಂತಹ ವಾಸನೆ ಬಂದ ಕಾರಣ ಮುಂಬೈ ಜನತೆ ಆತಂಕಕ್ಕೀಡಾದ ಘಟನೆ ಗುರುವಾರ ಸಂಜೆ ನಡೆದಿದೆ.
30ರಿಂದ 40 ನಿಮಿಷಗಳ ಬಳಿಕ ವಾಸನೆ ಕಡಿಮೆಯಾಗಲಾರಂಭಿಸಿದ್ದು, ಜನರು ನಿಟ್ಟುಸಿರುಬಿಟ್ಟಿದ್ದಾರೆ.

ಮುಂಬೈ ಪೊಲೀಸರು ಪೊವಾಯ್, ಚೆಂಬೂರ್, ಚಕಾಲ, ಗೋರೆಗಾಂವ್‌ನಿಂದ ಮೀರಾರೋಡ್‌ನ ತನಕ ದೂರುಗಳನ್ನು ಸ್ವೀಕರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನಿಲ ಸೋರಿಕೆಯ ಸುದ್ದಿ ವ್ಯಾಪಿಸಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ಮುಂಬೈ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣೆ ಘಟಕ, ಅನಿಲ ಸೋರಿಕೆಯ ಮೂಲವನ್ನು ಪತ್ತೆ ಹಚ್ಚಲು ಆರಂಭಿಸಿತು. ಹಲವು ಸ್ಥಳಗಳಲ್ಲಿ 9 ಅಗ್ನಿಶಾಮಕ ಯಂತ್ರಗಳನ್ನು ಕರೆಸಲಾಯಿತು.

ರಾಷ್ಟ್ರೀಯ ರಾಸಾಯನಿಕ ರಸಗೊಬ್ಬರ ಘಟಕದಲ್ಲಿ ಗ್ಯಾಸ್ ಲೀಕ್ ಆಗಿದೆ ಎಂಬ ವದಂತಿ ಹಬ್ಬಿತ್ತು. ಟ್ರಾಂಬೆ ಪೊಲೀಸರು ಅಲ್ಲಿಗೆ ತೆರಳಿ ಪರಿಶೀಲಿಸಿದಾಗ, ಆರ್‌ಸಿಎಫ್‌ನಲ್ಲಿ ಯಾವುದೇ ಅನಿಲ ಸೋರಿಕೆಯ ಮಾಹಿತಿ ಲಭಿಸಿರಲಿಲ್ಲ. ಮಹಾನಗರ ಗ್ಯಾಸ್ ಲಿಮಿಟೆಡ್ ಕೂಡ ತನ್ನ ಯಾವುದೆ ಪೈಪ್‌ಗಳಲ್ಲಿ ಅನಿಲ ಸೋರಿಕೆಯಾಗಿಲ್ಲ ಎಂದು ಹೇಳಿಕೆಯೊಂದರಲ್ಲಿ ಸ್ಪಷ್ಟಪಡಿಸಿದೆ.

ನಾವಿರುವ ಇಡೀ ಪ್ರದೇಶ ಗ್ಯಾಸ್ ಲೀಕ್‌ನಂತಹ ವಾಸನೆಯಿಂದ ಕೂಡಿತ್ತು ಎಂದು ವಿಲೇಪಾರ್ಲೆಯ ನಿವಾಸಿ ರಾಧಿಕಾ ಶರ್ಮಾ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News