ಪಕ್ಷದ ಕಚೇರಿ ಹೊರಗೆ ಪತ್ನಿಗೆ ಹೊಡೆದ ಬಿಜೆಪಿ ಜಿಲ್ಲಾಧ್ಯಕ್ಷನ ವಜಾ

Update: 2019-09-20 15:11 GMT

ಹೊಸದಿಲ್ಲಿ,ಸೆ.20: ಪಕ್ಷದ ಕಚೇರಿಯ ಹೊರಗೆ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ ದಿಲ್ಲಿಯ ಮೆಹರೌಲಿಯ ಬಿಜೆಪಿ ಜಿಲ್ಲಾಧ್ಯಕ್ಷ ಆಝಾದ್ ಸಿಂಗ್‌ ನನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಗುರುವಾರ ಬಿಜೆಪಿ ಮುಖ್ಯಕಚೇರಿಯಲ್ಲಿ ಚುನಾವಣಾ ಸಿದ್ಧತೆ ಕುರಿತು ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಜೊತೆ ನಡೆದ ಸಭೆಯ ನಂತರ ದಕ್ಷಿಣ ದಿಲ್ಲಿಯ ಮಾಜಿ ಮೇಯರ್ ಆಗಿರುವ ಸರಿತಾ ಚೌದರಿ ಮೇಲೆ ಅವರ ಪತಿ ಆಝಾದ್ ಸಿಂಗ್ ಹಲ್ಲೆ ನಡೆಸಿದ್ದು, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಘಟನೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಮಹಿಳೆಯ ಘನತೆಯ ಜೊತೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಘಟನೆಯ ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ ಮತ್ತು ಆರೋಪಿ ವ್ಯಕ್ತಿಯನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಸಿಂಗ್ ವಿರುದ್ಧ ಯಾವುದೇ ಪೊಲೀಸ್ ದೂರು ದಾಖಲಿಸಲಾಗಿಲ್ಲ. ಸಿಂಗ್ ಹಾಗೂ ಚೌದರಿಯ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು ಸಿಂಗ್ ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ್ದಾರೆ.

ಗುರುವಾರ ನಡೆದ ಘಟನೆ ಇದರ ಫಲವಾಗಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿರುವ ಸಿಂಗ್, ಮೊದಲು ಆಕೆ ನನ್ನ ಮೇಲೆ ದಾಳಿ ನಡೆಸಿ ಅವಾಚ್ಯ ಶಬ್ದಗಳಿಂದ ಬೈದಳು. ಇದಕ್ಕೆ ಪ್ರತಿಯಾಗಿ ನಾನು ಸ್ವರಕ್ಷಣೆಗಾಗಿ ಆಕೆಯನ್ನು ದೂಡಿದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ವಿಕಾಸ್ ತನ್ವರ್ ಅವರನ್ನು ಮೆಹರೌಲಿ ಬಿಜೆಪಿ ಕಾರ್ಯಕಾರಿ ಜಿಲ್ಲಾಧ್ಯಕ್ಷನನ್ನಾಗಿ ನೇಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News