×
Ad

ಮೋದಿ ಸರಕಾರದ ಸೂಚನೆ ಪಾಲಿಸಿದ ಎಲ್‌ಐಸಿಗೆ 20,000 ಕೋ.ರೂ.ಗೂ ಅಧಿಕ ನಷ್ಟ

Update: 2019-09-24 20:27 IST

 ಹೊಸದಿಲ್ಲಿ,ಸೆ.24: ಸರಕಾರಕ್ಕೆ ಹಣಕಾಸಿನ ಮುಗ್ಗಟ್ಟು ಉಂಟಾದಾಗಲೆಲ್ಲ ಹೆಚ್ಚಿನ ಸಂದರ್ಭಗಳಲ್ಲಿ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ)ವು ಆಪತ್ಬಾಂಧವನ ಪಾತ್ರವನ್ನು ವಹಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶೇರು ಮಾರುಕಟ್ಟೆ ಸೂಚ್ಯಂಕಗಳು ಏರುಗತಿಯಲ್ಲಿದ್ದರೂ ಸರಕಾರಿ ಸ್ವಾಮ್ಯದ ಕಂಪನಿ (ಪಿಎಸ್‌ಯು)ಗಳಲ್ಲಿ ಎಲ್‌ಐಸಿಯ ಹೂಡಿಕೆಗಳ ಮೌಲ್ಯ ಗಣನೀಯವಾಗಿ ಕುಸಿದಿದೆ ಎನ್ನುವುದನ್ನು ಸುದ್ದಿ ಜಾಲತಾಣ ‘ದಿ ಪ್ರಿಂಟ್’ನ ವಿಶ್ಲೇಷಣೆಯು ಬಹಿರಂಗಗೊಳಿಸಿದೆ.

 ಪಿಎಸ್‌ಯುಗಳ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಅಥವಾ ಶೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿರುವ ಅವುಗಳ ಶೇರುಗಳಲ್ಲಿ ಎಲ್‌ಐಸಿಯು ಹೂಡಿಕೆಯನ್ನು ಮಾಡಿದೆ. ಇಂತಹ ಕೆಲವು ಶೇರುಗಳ ಮಾರಾಟದ ಮೂಲಕ ಕೇಂದ್ರವು ಸಂಗ್ರಹಿಸಿರುವ ನಿಧಿಯಲ್ಲಿ ಸುಮಾರು ಶೇ.50ರಷ್ಟು ಕೊಡುಗೆ ಎಲ್‌ಐಸಿಯದಾಗಿದೆ. ಈಗ ಈ ಹೂಡಿಕೆೆಗಳ ಮೌಲ್ಯ ಅರ್ಧಕ್ಕೆ ಕುಸಿದಿರುವುದನ್ನು ಶೇರು ವಿನಿಮಯ ಕೇಂದ್ರಗಳ ದತ್ತಾಂಶಗಳು ತೋರಿಸಿವೆ.

 31 ಲ.ಕೋ.ರೂ.ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಹೊಂದಿರುವ ಎಲ್‌ಐಸಿ ದೇಶದ ಅತ್ಯಂತ ದೊಡ್ಡ ಜೀವವಿಮಾ ಸಂಸ್ಥೆಯಾಗಿದೆ. ಪಿಎಸ್‌ಯುಗಳು ಮತ್ತು ಸರಕಾರಿ ಬ್ಯಾಂಕುಗಳಲ್ಲಿ ಹೂಡಿಕೆಯ ಮೂಲಕ ಕಾಲಕಾಲಕ್ಕೆ ಸರಕಾರವನ್ನು ಸಂಕಷ್ಟದಿಂದ ಪಾರುಮಾಡಿರುವ ಅದು ಕಳೆದ ಕೆಲವು ವರ್ಷಗಳಿಂದ ರೈಲ್ವೆ,ರಸ್ತೆ ಮತ್ತು ವಿದ್ಯುತ್‌ನಂತಹ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಕ್ಷೇತ್ರಗಳಿಗೆ ನೆರವು ಒದಗಿಸುತ್ತಲೇ ಬಂದಿದೆ. ಎಲ್‌ಐಸಿಯ ಒಟ್ಟು ಹೂಡಿಕೆಗಳ ಪೈಕಿ ಸಾರ್ವಜನಿಕ ಹೂಡಿಕೆಗಳ ಪಾಲು 2014,ಮಾರ್ಚ್ ಶೇ.79ರಷ್ಟಿತ್ತು. ಇದು 2019,ಮಾರ್ಚ್‌ಗೆ ಶೇ.85ಕ್ಕೇರಿದೆ.

ಮೋದಿ ಆಡಳಿತದ ಅವಧಿಯಲ್ಲಿ ಎಲ್‌ಐಸಿಯು ಪಿಎಸ್‌ಯುಗಳಲ್ಲಿ 10.7 ಲ.ಕೋ.ರೂ.ಗಳನ್ನು ಹೂಡಿಕೆ ಮಾಡಿದೆ ಮತ್ತು ಇದು ಸರಿಸುಮಾರು 2014ರವರೆಗಿನ ಆರು ದಶಕಗಳಲ್ಲಿ ಅದರ ಹೂಡಿಕೆಗಳ ಮೊತ್ತಕ್ಕೆ ಸಮನಾಗಿದೆ.

ನಷ್ಟವನ್ನುಂಟು ಮಾಡಿರುವ ಹೂಡಿಕೆಗಳು 2017,ನವಂಬರ್‌ನಲ್ಲಿ ಸರಕಾರಿ ಸ್ವಾಮ್ಯದ ನ್ಯೂ ಇಂಡಿಯಾ ಅಶ್ಯುರನ್ಸ್ ಕಂಪನಿಯ ಐಪಿಒ ಸಂದರ್ಭದಲ್ಲಿ ಎಲ್‌ಐಸಿ ಶೇ.50ಕ್ಕೂ ಅಧಿಕ ಶೇರುಗಳನ್ನು ಖರೀದಿಸಿತ್ತು. ಆಗ ಪ್ರತಿ ಶೇರಿಗೆ 800 ರೂ.ಗಳ ನೀಡಿಕೆ ಬೆಲೆಯಂತೆ ಒಟ್ಟು 5,713 ಕೋ.ರೂ.ಮೌಲ್ಯದ ಶೇರುಗಳನ್ನು ಎಲ್‌ಐಸಿ ಖರೀದಿಸಿದ್ದು, ಈಗ ಈ ಹೂಡಿಕೆಯ ಮೌಲ್ಯವು ಶೇ.86ರಷ್ಟು ಕುಸಿದು 757 ಕೋ.ರೂ.ಗೆ ತಲುಪಿದೆ. 2019,ಸೆ.23ಕ್ಕೆ ಇದ್ದಂತೆ ಕಂಪನಿಯ ಪ್ರತಿ ಶೇರಿನ ದರ 106.85ಕ್ಕೆ ಕುಸಿದಿದೆ.

ಇನ್ನೊಂದು ಸರಕಾರಿ ಸ್ವಾಮ್ಯದ ಸಂಸ್ಥೆ ಜನರಲ್ ಇನ್ಶುರನ್ಸ್ ಕಂಪನಿಯದೂ ಇದೇ ಕಥೆ. ಎಲ್‌ಐಸಿ 2017, ಅಕ್ಟೋಬರ್‌ನಲ್ಲಿ ಈ ಕಂಪನಿಯ ಶೇರುಗಳಲ್ಲಿ 5,641 ಕೋ.ರೂ.ಗಳನ್ನು ತೊಡಗಿಸಿದ್ದು,ಅದೀಗ 2,979 ಕೋ.ರೂ.ಗೆ ಕುಸಿದಿದೆ.

ಇತರ ಪಿಎಸ್‌ಯುಗಳ ಐಪಿಒಗಳಲ್ಲಿ ಎಲ್‌ಐಸಿಯ ಹೂಡಿಕೆಗಳೂ ನಷ್ಟವನ್ನುಂಟು ಮಾಡಿವೆ. 2018ರಲ್ಲಿ ಮಾರ್ಚ್‌ನಲ್ಲಿ ಅದು ಎಚ್‌ಎಎಲ್‌ನ ಶೇರುಗಳಲ್ಲಿ 2,843 ಕೋ.ರೂ.ಗಳನ್ನು ಹೂಡಿಕೆ ಮಾಡಿತ್ತು. ಇದು ಈಗ 1,751 ಕೋ.ರೂ.ಗೆ ಕುಸಿದಿದೆ. ಎಂಎಸ್‌ಟಿಸಿ ಮತ್ತು ಭಾರತ ಡೈನಾಮಿಕ್ಸ್‌ಗಳಲ್ಲಿಯ ತುಲನಾತ್ಮಕವಾಗಿ ಸಣ್ಣ ಹೂಡಿಕೆಗಳು ನಷ್ಟದಲ್ಲಿವೆ.

ಎಲ್‌ಐಸಿಯಿಂದ ನಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕಿನ ಸ್ವಾಧೀನ ಇನ್ನೊಂದು ಉದಾಹರಣೆಯಾಗಿದೆ.

2019,ಸೆಪ್ಟಂಬರ್-ಡಿಸೆಂಬರ್ ಅವಧಿಯಲ್ಲಿ ಐಡಿಬಿಐ ಶೇರುಗಳಲ್ಲಿ 21,624 ಕೋ.ರೂ.ಗಳನ್ನು ತೊಡಗಿಸುವ ಮೂಲಕ ಎಲ್‌ಐಸಿಯು ತನ್ನ ಪಾಲು ಬಂಡವಾಳವನ್ನು ಶೇ.8ರಿಂದ ಶೇ.51ಕ್ಕೆ ಹೆಚ್ಚಿಸಿಕೊಂಡಿತ್ತು. ಈಗ ಖಾಸಗಿ ಕ್ಷೇತ್ರದ ಬ್ಯಾಂಕ್ ಎಂದು ವರ್ಗೀಕೃತಗೊಂಡಿರುವ ಐಡಿಬಿಐ ಕೇವಲ ಎರಡು ತ್ರೈಮಾಸಿಕಗಳಲ್ಲಿ 8,718 ಕೋ.ರೂ.ಗಳ ಬೃಹತ್ ನಷ್ಟ ದಾಖಲಿಸುವುದರೊಡನೆ ಎಲ್‌ಐಸಿಯ ಪಾಲು ಬಂಡವಾಳದ ಮೌಲ್ಯ 10,967 ಕೋ.ರೂ.ಗಳಿಗೆ ಕುಸಿದಿದೆ.

2017, ಆಗಸ್ಟ್‌ನಲ್ಲಿ ಇನ್ನೊಂದು ಪಿಎಸ್‌ಯು ಎನ್‌ಟಿಪಿಸಿಯಲ್ಲಿಯೂ ಎಲ್‌ಐಸಿ ಸುಮಾರು 4,275 ಕೋ.ರೂ.ಗಳನ್ನು ಹೂಡಿಕೆ ಮಾಡಿದ್ದು ಅದರ ವೌಲ್ಯವೀಗ 3,003 ಕೋ.ರೂ.ಗೆ ಕುಸಿದಿದೆ.

ಕಳೆದ ಎರಡು ವರ್ಷಗಳಲ್ಲಿ ಕೇವಲ ಎರಡು ಪಿಎಸ್‌ಯುಗಳಲ್ಲಿಯ ಎಲ್‌ಐಸಿ ಹೂಡಿಕೆ ಲಾಭದಲ್ಲಿದೆ. ಮಿಶ್ರಧಾತು ನಿಗಮ ಮತ್ತು ಜಿಆರ್‌ಎಸ್‌ಇಗಳಲ್ಲಿ ಅದು ಒಟ್ಟು 246 ಕೋ.ರೂ.ಗಳನ್ನು ತೊಡಗಿಸಿದ್ದು,ಕೇವಲ 50 ಕೋ.ರೂ.ಗಳ ಲಾಭ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News