ಮಾರ್ಗಸೂಚಿ ರಚನೆಗೆ ಅಗತ್ಯ ಕಾಲಾವಕಾಶದ ಬಗ್ಗೆ ತಿಳಿಸುವಂತೆ ಕೇಂದ್ರಕ್ಕೆ ಸುಪ್ರೀಂ ನಿರ್ದೇಶ
ಹೊಸದಿಲ್ಲಿ,ಸೆ.24: ತಂತ್ರಜ್ಞಾನವು ಅಪಾಯಕಾರಿ ತಿರುವನ್ನು ಪಡೆದುಕೊಂಡಿದೆ ಎಂದು ಮಂಗಳವಾರ ಅಭಿಪ್ರಾಯ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು,ದೇಶದಲ್ಲಿ ಸಾಮಾಜಿಕ ಜಾಲತಾಣಗಳ ದುರ್ಬಳಕೆಯನ್ನು ತಡೆಯಲು ಮಾರ್ಗಸೂಚಿಯನ್ನು ರಚಿಸಲು ಅಗತ್ಯ ಕಾಲಾವಕಾಶದ ಬಗ್ಗೆ ಮೂರು ವಾರಗಳಲ್ಲಿ ತನಗೆ ತಿಳಿಸುವಂತೆ ಕೇಂದ್ರಕ್ಕೆ ನಿರ್ದೇಶ ನೀಡಿದೆ.
ಸಂದೇಶ ಅಥವಾ ಆನ್‌ಲೈನ್ ವಿಷಯದ ಮೂಲವನ್ನು ಪತ್ತೆ ಹಚ್ಚುವಲ್ಲಿ ಕೆಲವು ಸಾಮಾಜಿಕ ಜಾಲತಾಣಗಳ ಅಸಾಮರ್ಥ್ಯದ ಬಗ್ಗೆ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರ ಪೀಠವು,ಈಗ ಸರಕಾರದ ಮಧ್ಯಪ್ರವೇಶ ಅಗತ್ಯವಾಗಿದೆ ಎಂದು ಹೇಳಿತು.
ಸರ್ವೋಚ್ಚ ನ್ಯಾಯಾಲಯ ಅಥವಾ ಉಚ್ಚ ನ್ಯಾಯಾಲಯಗಳು ಈ ವೈಜ್ಞಾನಿಕ ವಿಷಯವನ್ನು ನಿರ್ಧರಿಸಲು ಸಮರ್ಥವಾಗಿಲ್ಲ ಮತ್ತು ಈ ಸಮಸ್ಯೆಯನ್ನು ನಿಭಾಯಿಸಲು ಸರಕಾರವು ಸೂಕ್ತ ಮಾರ್ಗಸೂಚಿಯನ್ನು ತರಬೇಕು ಎಂದು ಪೀಠವು ತಿಳಿಸಿತು.
ಬಳಕೆದಾರರ ಸಾಮಾಜಿಕ ಜಾಲತಾಣ ಖಾತೆಗಳನ್ನು ಅವರ ಆಧಾರ್‌ನೊಂದಿಗೆ ಜೋಡಣೆಗೊಳಿಸಲು ಮಾರ್ಗಸೂಚಿಯನ್ನು ರಚಿಸಲು ಚಿಂತನೆಯನ್ನು ನಡೆಸಲಾಗುತ್ತಿದೆಯೇ ಎನ್ನುವುದನ್ನು ಸ್ಪಷ್ಟಪಡಿಸುವಂತೆ ಸರ್ವೋಚ್ಚ ನ್ಯಾಯಾಲಯವು ಈ ಮೊದಲು ಕೇಂದ್ರಕ್ಕೆ ಸೂಚಿಸಿತ್ತು.
ಪ್ರಕರಣದ ಅರ್ಹತೆಯನ್ನು ತಾನು ಪರಿಶೀಲಿಸುವುದಿಲ್ಲ ಮತ್ತು ಮದ್ರಾಸ್,ಬಾಂಬೆ ಹಾಗೂ ಮಧ್ಯಪ್ರದೇಶ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿಯಿರುವ ಆಧಾರ್ ಜೋಡಣೆಗೆ ಸಂಬಂಧಿಸಿದ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಫೇಸ್‌ಬುಕ್ ಸಲ್ಲಿಸಿರುವ ಅರ್ಜಿಯ ಬಗ್ಗೆ ಮಾತ್ರ ತಾನು ನಿರ್ಧರಿಸುವುದಾಗಿ ಪೀಠವು ತಿಳಿಸಿತ್ತು ಮತ್ತು ಪ್ರಕರಣಗಳ ವರ್ಗಾವಣೆಗೆ ತನ್ನ ಆಕ್ಷೇಪವಿಲ್ಲ ಎಂದು ಸರಕಾರವು ಹೇಳಿತ್ತು.
ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶಗಳ ವಿರುದ್ಧ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್ ಎರಡು ಮೇಲ್ಮನವಿಗಳನ್ನು ಸಲ್ಲಿಸಿವೆ.
ವರ್ಗಾವಣೆ ಅರ್ಜಿಗೆ ಉತ್ತರಿಸಿದ್ದ ತಮಿಳುನಾಡು ಸರಕಾರವು ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳು ಭಾರತೀಯ ಕಾನೂನುಗಳನ್ನು ಪಾಲಿಸುತ್ತಿಲ್ಲ ಎಂದು ತಿಳಿಸಿತ್ತು. ಮದ್ರಾಸ್ ಉಚ್ಚ ನ್ಯಾಯಾಲಯವು ಆಧಾರ ಜೋಡಣೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಮುಂದುವರಿಸಬಹುದು,ಆದರೆ ಯಾವುದೇ ಆದೇಶಗಳನ್ನು ಹೊರಡಿಸಕೂಡದು ಎಂಬ ಸರ್ವೋಚ್ಚ ನ್ಯಾಯಾಲಯದ ಆ.20ರ ಆದೇಶದ ಪರಿಷ್ಕರಣೆಯನ್ನು ಅದು ಕೋರಿತ್ತು.