ದಿಲ್ಲಿಯಲ್ಲಿ ಎನ್‌ಆರ್‌ಸಿ ಜಾರಿಯಾದರೆ ಮೊದಲು ತಿವಾರಿ ಹೊರಹೋಗುತ್ತಾರೆ: ಕೇಜ್ರಿವಾಲ್

Update: 2019-09-25 16:47 GMT

ಹೊಸದಿಲ್ಲಿ, ಸೆ.25: ದಿಲ್ಲಿಯಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಯಾದರೆ ದಿಲ್ಲಿಯಿಂದ ಹೊರಹೋಗುವ ಮೊದಲ ವ್ಯಕ್ತಿ ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಎಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಹೇಳಿದ್ದಾರೆ.

ಅಸ್ಸಾಂನಿಂದ ಹೊರಗೂ ಎನ್‌ಆರ್‌ಸಿ ಜಾರಿಯಾಗಬೇಕು ಎಂದು ತಿವಾರಿ ಹಲವು ಬಾರಿ ಹೇಳಿಕೆ ನೀಡಿದ್ದರು. ಅಲ್ಲದೆ ದಿಲ್ಲಿಯಲ್ಲಿ ನೆಲೆಸಿರುವ ಹಲವು ಅಕ್ರಮ ವಲಸಿಗರು ಕ್ರಿಮಿನಲ್ ಕೃತ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು ಇದರಿಂದ ದಿಲ್ಲಿಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಕಳೆದ ತಿಂಗಳು ಹೇಳಿಕೆ ನೀಡಿದ್ದರು.

ದಿಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರೂ ವಿದ್ಯುಚ್ಛಕ್ತಿ ಸಬ್ಸಿಡಿಯ ಲಾಭ ಪಡೆಯುವ ಆಮ್ ಆದ್ಮಿ ಪಕ್ಷದ ಸರಕಾರದ ಹೊಸ ಯೋಜನೆಗೆ ದಿಲ್ಲಯಲ್ಲಿ ಚಾಲನೆ ನೀಡಿ ಮಾತನಾಡಿದ ಕೇಜ್ರಿವಾಲ್, ದಿಲ್ಲಿಯಲ್ಲಿ ಎನ್‌ಆರ್‌ಸಿ ಜಾರಿಯಾಗಬೇಕೆಂದು ಬಿಜೆಪಿ ಮುಖಂಡ ಮನೋಜ್ ತಿವಾರಿ ನಿರಂತರ ಹೇಳಿಕೆ ನೀಡುತ್ತಿದ್ದಾರೆ. ಒಂದು ವೇಳೆ ಜಾರಿಯಾದರೆ ಮೊದಲು ಹೊರಗೆ ಹೋಗುವ ವ್ಯಕ್ತಿ ಅವರೇ ಆಗಿದ್ದಾರೆ ಎಂದು ಕುಟುಕಿದರು. ಈ ಮಧ್ಯೆ ಕೇಜ್ರೀವಾಲ್ ಹೇಳಿಕೆಗೆ ಬಿಜೆಪಿಯ ಅಧ್ಯಕ್ಷ ಕಪಿಲ್ ಮಿಶ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎನ್‌ಆರ್‌ಸಿ ಜಾರಿಯಾದರೆ ದಿಲ್ಲಿಯಿಂದ ಬಿಹಾರ ಹಾಗೂ ಉ.ಪ್ರದೇಶದ ಜನರು ಹೊರಹೋಗಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಎನ್‌ಆರ್‌ಸಿ ಎಂದರೆ ಅಕ್ರಮ ವಿದೇಶಿಗರನ್ನು ಪತ್ತೆಹಚ್ಚುವ ಪ್ರಕ್ರಿಯೆ. ಅನ್ಯರಾಜ್ಯದವರನ್ನು ಪತ್ತೆಹಚ್ಚಿ ಹೊರಹಾಕುವ ಪ್ರಕ್ರಿಯೆಯಲ್ಲ ಎಂಬ ಸಾಮಾನ್ಯ ಜ್ಞಾನವೂ ದಿಲ್ಲಿ ಮುಖ್ಯಮಂತ್ರಿಗಿಲ್ಲ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News