×
Ad

ಮಾಟ ಮಂತ್ರ ಶಂಕೆ: ಬುಡಕಟ್ಟು ವ್ಯಕ್ತಿಯನ್ನು ಥಳಿಸಿ, ಜೀವಂತ ಸುಟ್ಟ ಗ್ರಾಮಸ್ಥರು

Update: 2019-09-26 09:26 IST

ವಿಶಾಖಪಟ್ಟಣಂ: ಮಾಟ ಮಂತ್ರ ಮಾಡುತ್ತಿದ್ದ ಆರೋಪದ ಮೇಲೆ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರನ್ನು ಗ್ರಾಮಸ್ಥರು ಹಿಡಿದು ಥಳಿಸಿ, ಬೆಂಕಿ ಹಚ್ಚಿ ಸಾಯಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಪುಟ್ಟಬಂಧ ಗ್ರಾಮದ ರೈತ ಕಿಲ್ಲೊ ಜಯರಾಂ ಎಂಬಾತ ಹತ್ಯೆಗೀಡಾದ ವ್ಯಕ್ತಿ. ಗ್ರಾಮದಲ್ಲಿ ಅಸ್ವಸ್ಥಗೊಂಡಿದ್ದ 10 ವರ್ಷದ ಬಾಲಕಿಯ ಸಾವಿಗೆ ಈತ ಕಾರಣ ಎಂದು ಆಪಾದಿಸಿ ಈತನ ಮೇಲೆ ಹಲ್ಲೆ ನಡೆಸಲಾಗಿದೆ.

ಬಾಲಕಿಯ ಸಂಬಂಧಿಕರು ಜಯರಾಂನನ್ನು ನಿರ್ದಯವಾಗಿ ಥಳಿಸಿ, ಪೆಟ್ರೋಲ್‍ನಲ್ಲಿ ಮುಳುಗಿಸಿ ಬೆಂಕಿ ಹಚ್ಚಿದರು. ಜಯರಾಂನ ಕುಟುಂಬದವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ವ್ಯಕ್ತಿಯ ಕುಟುಂಬದವರು ಬುಧವಾರ ಸಂಜೆ ಪೊಲೀಸರಿಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ವಾಸ್ತವವಾಗಿ ಬಾಲಕಿಯ ಅಸ್ವಸ್ಥತೆಗೆ ಮತ್ತು ಸಾವಿಗೆ ಸೊಳ್ಳೆ ಜನ್ಯ ರೋಗ ಕಾರಣ ಎಂದು ಪೊಲೀಸರು ವಿವರಿಸಿದ್ದಾರೆ. ಕೆಲ ದಿನಗಳ ಹಿಂದೆ ಗ್ರಾಮಸ್ಥರು ಪಂಚಾಯ್ತಿ ನಡೆಸಿ ಈ ವಿಷಯದ ಬಗ್ಗೆ ಚರ್ಚಿಸಿದ್ದರು. ಮೃತ ಬಾಲಕಿಯ ಕುಟುಂಬದವರು ಜಯರಾಂನನ್ನು ಮಾಟಗಾರ ಎಂದು ನಿರ್ಣಯಿಸಿದ್ದಾಗಿ ಸಬ್ ಇನ್‍ಸ್ಪೆಕ್ಟರ್ ಎಲ್.ಹಿಮಗಿರಿ ಸ್ಪಷ್ಟಪಡಿಸಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News