ಅಸ್ಸಾಂ ಎನ್‌ಆರ್‌ಸಿಯಿಂದ ಹೊರಗುಳಿದವರು ಮತ ಚಲಾಯಿಸಬಹುದು: ಚುನಾವಣಾ ಆಯೋಗ

Update: 2019-09-27 17:05 GMT

ಹೊಸದಿಲ್ಲಿ, ಸೆ. 27: ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯಿಂದ ಹೊರಗುಳಿದ ಜನರು ಮತ ಹಾಕಬಹುದು ಎಂದು ಚುನಾವಣಾ ಆಯೋಗ ಶುಕ್ರವಾರ ಹೇಳಿದೆ. ಅಸ್ಸಾಂನ ನೋಂದಾಯಿತ ಮತದಾರರು ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯಲ್ಲಿ ಒಳಗೊಳ್ಳದೇ ಇದ್ದರೂ ಅವರನ್ನು ‘ಅನುಮಾನಾಸ್ಪದ’ ಎಂದು ಗುರುತಿಸದೇ ಇರಲು ಚುನಾವಣಾ ಆಯೋಗ ನಿರ್ಧರಿಸಿದೆ. ಅಲ್ಲದೆ, ಅಂತಹ ಪ್ರಕರಣಗಳ ಬಗ್ಗೆ ವಿದೇಶಿಗರ ನ್ಯಾಯಾಧಿಕರಣ ನಿರ್ಧಾರ ತೆಗೆದುಕೊಳ್ಳುವ ವರೆಗೆ ಅವರು ಚುನಾವಣೆಯಲ್ಲಿ ಮತ ಚಲಾಯಿಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

 ಅನಿಶ್ಚಿತ ಹಾಗೂ ವಿವಾದದ ಅಡಿಯಲ್ಲಿ ಇರುವ ನಾಗರಿಕರನ್ನು ಅಸ್ಸಾಂನ ಮತದಾರರ ಪಟ್ಟಿಯಲ್ಲಿ ‘ಅನುಮಾನಾಸ್ಪದ’ ಅಥವಾ ‘ಡಿ’ ಶ್ರೇಣಿ ಎಂದು ಗುರುತಿಸಲಾಗುತ್ತದೆ. ರಾಜ್ಯ ಮತದಾರರ ಪಟ್ಟಿಯನ್ನು 1997ರಲ್ಲಿ ಪರಿಷ್ಕರಿಸುವ ಸಂದರ್ಭ ಚುನಾವಣಾ ಆಯೋಗ ಇದನ್ನು ಪರಿಚಯಿಸಿತ್ತು. ಇದರಿಂದ ‘ಡಿ’ ವರ್ಗದ ಮತದಾರರು ಅಸ್ಸಾಂನ ಮತದಾರರ ಪಟ್ಟಿಯಲ್ಲಿ ಮುಂದುವರಿದರು. ಆದರೆ, ವಿದೇಶಿಗರ ನ್ಯಾಯಾಧಿಕರಣ ಪ್ರಕರಣವನ್ನು ನಿರ್ಧರಿಸದ ಹೊರತು ಅವರು ಚುನಾವಣೆಯಲ್ಲಿ ಮತ ಚಲಾಯಿಸುವಂತಿರಲಿಲ್ಲ. ಇದರಿಂದ ಇತ್ತೀಚೆಗೆ ನಡೆದ ಲೋಕಸಭಾ ಚುನಾಣೆಯಲ್ಲಿ ಸುಮಾರು 1.2 ಲಕ್ಷ ‘ಡಿ’ ಮತದಾರರು ಭಾಗವಹಿಸಿರಲಿಲ್ಲ. ಈ ನಡುವೆ ರಾಷ್ಟ್ರೀಯ ಪೌರತ್ವ ನೋಂದಣಿ ಕರಡಿನಲ್ಲಿ ಒಳಗೊಳ್ಳದೇ ಇರುವವರಿಗೆ ಮತ ಚಲಾಯಿಸುವ ಅವಕಾಶ ನೀಡಲಾಗಿದೆ. ಆಗಸ್ಟ್ 30ರಂದು ಬಿಡುಗಡೆ ಮಾಡಲಾದ ಅಂತಿಮ ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯಲ್ಲಿ 3.11 ಕೋಟಿ ಅರ್ಜಿದಾರರನ್ನು ಒಳಗೊಳಿಸಲಾಗಿತ್ತು. 19 ಲಕ್ಷ ಜನರು ಹೊರಗುಳಿದಿದ್ದರು.

 ಈ ಪ್ರಕಟನೆಯ ನಂತರ ಪಟ್ಟಿಯಲ್ಲಿ ಒಳಗೊಳ್ಳದೇ ಇರುವ ವ್ಯಕ್ತಿಗಳ ನಾಗರಿಕತ್ವವನ್ನು ‘ಅನುಮಾನಾಸ್ಪದ’ ಎಂದು ಪರಿಗಣಿಸಬೇಕೆ ಹಾಗೂ ವಿದೇಶಿಗರ ನ್ಯಾಯಾಧಿಕರಣ ನಿರ್ಧರಿಸುವವರೆಗೆ ಅವರನ್ನು ‘ಅನಮಾನಾಸ್ಪದ’ ಎಂದು ಪರಿಗಣಿಸಬೇಕೇ ಎಂಬ ಕಾನೂನಾತ್ಮಕ ಪ್ರಶ್ನೆಯನ್ನು ಆಯೋಗ ಎದುರಿಸಿತ್ತು. ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯಿಂದ ಹೊರಗುಳಿದಿರುವ ವ್ಯಕ್ತಿಗಳ ಕುರಿತ ಸಂದೇಹಕ್ಕೆ ಸ್ಪಷ್ಟನೆ ನೀಡಿದ್ದ ಕೇಂದ್ರ ಗೃಹ ಸಚಿವಾಲಯ, ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ಹೊರಗುಳಿದವರನ್ನು ವಿದೇಶಿಗರು ಎಂದು ಘೋಷಿಸುವುದಿಲ್ಲ. ಅವರಿಗೆ ನ್ಯಾಯಾಧಿಕರಣದ ಎದುರು ನಾಗರಿಕತ್ವ ಸಾಬೀತಪಡಿಸಲು ಅವಕಾಶ ನೀಡಲಾಗುವುದು ಎಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News