2019ರ ಲೋಕಸಭಾ ಚುನಾವಣೆಯ ‘ಅಧಿಕೃತ’ ಫಲಿತಾಂಶ ಇನ್ನೂ ಬಹಿರಂಗ ಪಡಿಸದ ಚುನಾವಣಾ ಆಯೋಗ

Update: 2019-09-28 16:47 GMT

ಹೊಸದಿಲ್ಲಿ,ಸೆ.28: 2019ರ ಲೋಕಸಭಾ ಚುನಾವಣೆಯಲ್ಲಿ ಚಲಾಯಿಸಲಾದ ಮತಗಳು ಮತ್ತು ಎಣಿಕೆಯಾದ ಮತಗಳ ಸಂಖ್ಯೆಗಳ ‘ಅಧಿಕೃತ’ ಅಂಕಿಅಂಶವನ್ನು ಚುನಾವಣಾ ಆಯೋಗದ ಜಾಲತಾಣದಲ್ಲಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ, ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿ ನಾಲ್ಕು ತಿಂಗಳು ಕಳೆದಿದ್ದರೂ ಈ ಕುರಿತು ತನ್ನ ಜಾಲತಾಣದಲ್ಲಿ ನೀಡಲಾಗಿರುವ ಮಾಹಿತಿ ಮತ್ತು ಅಂಕಿಅಂಶಗಳು ತಾತ್ಕಾಲಿಕವಾಗಿವೆ (ಪ್ರೊವಿಶನಲ್) ಎಂದೇ ಆಯೋಗ ತಿಳಿಸಿದೆ ಎಂದು ಆನ್‌ಲೈನ್ ಸುದ್ದಿಜಾಲ ‘thequint.com’ ವರದಿ ಮಾಡಿದೆ.

ಚುನಾವಣೆ ಫಲತಾಂಶ ಹೊರಬಂದ ಕೂಡಲೇ ದೇಶಾದ್ಯಂತ ಎಲ್ಲ ಇವಿಎಂಗಳಲ್ಲಿ ದಾಖಲಾದ ಮತಗಳನ್ನು ಆಯೋಗದ ಜಾಲತಾಣದಲ್ಲಿ ಹಾಕಲಾದರೂ ಅದನ್ನು ತಾತ್ಕಾಲಿಕ ಎಂದು ಆಯೋಗ ಹೇಳುತ್ತದೆ. ಕೆಲವು ದಿನಗಳ ನಂತರ ಆಯೋಗ ಚುನಾವಣೆಯ ಅಂಕಿಅಂಶಗಳನ್ನು ಪುನರ್‌ಪರಿಶೀಲಿಸಿ ಎಲ್ಲವೂ ಸರಿಯಿದೆ ಎಂದು ಖಚಿತಪಡಿಸಿದ ನಂತರ ತನ್ನ ಜಾಲತಾಣದಲ್ಲಿ ಹಾಕಲಾದ ಚುನಾವಣಾ ಫಲಿತಾಂಶ ಅಧಿಕೃತವಾಗಿದೆ (ಅಥಂಟಿಕೇಟೆಡ್) ಎಂದು ಘೋಷಿಸುತ್ತದೆ. ಆದರೆ 2019ರ ಸಾರ್ವತ್ರಿಕ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದರೂ ಇನ್ನೂ ಆಯೋಗ ತನ್ನ ಜಾಲತಾಣದಲ್ಲಿ ಪ್ರಕಟಿಸಿರುವ ಅಂಕಿಅಂಶವನ್ನು ಅಧಿಕೃತ ಎಂದು ಘೋಷಿಸಿಲ್ಲ. ಜೂನ್ ಒಂದರಂದು ಆಯೋಗ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಮುಂದಿನ ಎರಡು ಮೂರು ತಿಂಗಳಲ್ಲಿ ಅಧಿಕೃತ ಅಂಕಿಅಂಶ ಪ್ರಕಟಿಸಲಾಗುವುದು ಎಂದು ತಿಳಿಸಿತ್ತು. ಆದರೆ ನಾಲ್ಕು ತಿಂಗಳ ನಂತರವೂ ಅದು ನಡೆಯಲೇ ಇಲ್ಲ ಎಂದು ‘the quint’ ವರದಿ ತಿಳಿಸಿದೆ.

ಇವಿಎಂನಲ್ಲಿ ಚಲಾವಣೆಯಾದ ಹಾಗು ಎಣಿಕೆಯಾದ ಮತಗಳಲ್ಲಿ ಭಾರೀ ವ್ಯತ್ಯಾಸವಿದೆ. ಆಯೋಗದ ವೆಬ್ ಸೈಟ್ ನಲ್ಲೇ 370 ಕ್ಷೇತ್ರಗಳಲ್ಲಿ ಅಂತರ ಕಂಡು ಬಂದಿದೆ ಎಂದು ಮೇ 31 ರಂದು thequint.com ವರದಿ ಮಾಡಿತ್ತು.

ನಂತರ ಪತ್ರಿಕಾ ಪ್ರಕಟಣೆಯಲ್ಲಿ ಈ ಎಲ್ಲಾ ಅಂಕಿಅಂಶಗಳು ತಾತ್ಕಾಲಿಕ ಮತ್ತು ಅವುಗಳು ಅಂದಾಜಿಸಲಾಗಿದ್ದು ಬದಲಾವಣೆಯ ಸಾಧ್ಯತೆಯಿದೆ ಎಂದು ಘೋಷಿಸುವ ಮೂಲಕ ಜಾಲತಾಣದಲ್ಲಿ ನಡೆದಿರುವ ಅಂಕಿಅಂಶ ಎಡವಟ್ಟಿಗೆ ಚುನಾವಣಾ ಆಯೋಗ ಸಮಜಾಯಿಷಿ ನೀಡಿತ್ತು. ಆದರೆ ಕೆಲವು ದಿನಗಳ ನಂತರ, ಎಲ್ಲ ತಪ್ಪು ಅಂಕಿಅಂಶಗಳನ್ನು ಸರಿಯಾದ ಅಂಕಿಅಂಶಗಳೊಂದಿಗೆ ನಿಗೂಢವಾಗಿ ಬದಲಾಯಿಸಲಾಗಿತ್ತು ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ‘the quint’ ಆಯೋಗಕ್ಕೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದೆ.

ಮೇ 30ರಂದು ಆಯೋಗದ ಜಾಲತಾಣದಲ್ಲಿ ‘the quint’ ಪರಿಶೀಲಿಸಿ ಚುನಾವಣಾ ಅಂಕಿಅಂಶಗಳು ತಾತ್ಕಾಲಿಕವಾಗಿದ್ದರೆ ಜೂನ್ 1ರಂದು ಆಯೋಗದ ಜಾಲತಾಣದಲ್ಲಿ ಹಾಕಲಾದ ಅಂಕಿಅಂಶಗಳು ಅಧಿಕೃತವೇ?

ಹೌದಾದರೆ, ಚುನಾವಣಾ ಆಯೋಗ ಇನ್ನೂ ಯಾಕೆ ಈ ಸರಿಯಾದ ಅಂಕಿಅಂಶಗಳನ್ನು ತಾತ್ಕಾಲಿಕ ಎಂದು ಘೋಷಿಸುತ್ತಿದೆ? ಇದೂ ಹಲವು ಪ್ರಶ್ನೆಗಳನ್ನು ಕೇಳುತ್ತದೆ.

ಚುನಾವಣಾ ಆಯೋಗ ಯಾಕೆ ರಾಜ್ಯವಾರು ಮತದಾನ ಅಂಕಿಅಂಶ ನೀಡುತ್ತಿದೆಯೇ ಹೊರತು ಕ್ಷೇತ್ರವಾರು ಮತದಾನ ವಿವರ ನೀಡುತ್ತಿಲ್ಲ?

370 ಕ್ಷೇತ್ರಗಳಿಗೂ ಅಧಿಕ ಕಡೆಗಳಲ್ಲಿ ತಪ್ಪು ಅಂಕಿಅಂಶ ದೊರೆಯಲು ಕಾರಣವೇನು?

ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವದ ಜನರು ಅಧಿಕೃತ ಚುನಾವಣಾ ಫಲಿತಾಂಶ ತಿಳಿಯದಂತೆ ಮಾಡಿರುವುದಾದರೂ ಯಾಕೆ?

ಈ ಎಲ್ಲ ಪ್ರಶ್ನೆಗಳನ್ನು ‘the quint’ ಚುನಾವಣಾ ಆಯೋಗಕ್ಕೆ ಕೇಳಿದ್ದರೂ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News